ಸುಳ್ಯ: ಸುಮಾರು 13 ವರ್ಷಗಳ ಹಿಂದೆ ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ಶ್ರೀನಿವಾಸ್ @ ಶೀನಾ ಅವರನ್ನು ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರ್ದೋಷಿ ಎಂದು ಘೋಷಿಸಿ ಖುಲಾಸೆಗೊಳಿಸಿದೆ.
2013ರ ಜ.27ರಂದು ನಾಗರಾಜ್ ಎಂಬವರು ಬಾಡಿಗೆ ಟಾಟಾ ಇಂಡಿಕಾ ಕಾರಿನಲ್ಲಿ ಮೈಸೂರು ಕಡೆಗೆ ತೆರಳುತ್ತಿದ್ದ ವೇಳೆ ಕಲ್ಲುಗುಂಡಿ ಬಳಿ ವಾಹನವನ್ನು ತಡೆದು ದರೋಡೆ ಮಾಡಲಾಗಿತ್ತು. ಕಾರಿನಲ್ಲಿದ್ದ ಚಾಲಕನ ಬಳಿಯಿದ್ದ 20 ಗ್ರಾಂ ಚಿನ್ನದ ಸರ, ಮೊಬೈಲ್ ಹಾಗೂ ವಾಹನದ ದಾಖಲೆಗಳು, ನಾಗರಾಜ್ ಅವರ ಬಳಿಯಿದ್ದ 16 ಗ್ರಾಂ ಚಿನ್ನದ ಸರ, 13 ಗ್ರಾಂ ಬ್ರಾಸ್‌ಲೇಟ್, 5 ಗ್ರಾಂ ತೂಕದ ಎರಡು ಉಂಗುರಗಳು, ₹4,500 ನಗದು, ಪಾನ್ ಕಾರ್ಡ್, ಎಟಿಎಂ ಕಾರ್ಡ್ ಇದ್ದ ಪರ್ಸ್ ಹಾಗೂ ಅವರ ಪತ್ನಿಯ ಬಳಿಯಿದ್ದ ₹2,500 ನಗದನ್ನು ಸುಲಿಗೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.
ಈ ಸಂಬಂಧ ಸುಳ್ಯ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ಸಂದರ್ಭದಲ್ಲಿ ಶ್ರೀನಿವಾಸ್ ತಲೆಮರೆಸಿಕೊಂಡಿದ್ದರಿಂದ ಅವರ ವಿರುದ್ಧ ವಾರಂಟ್ ಜಾರಿಯಾಗಿತ್ತು. ಬಳಿಕ ಸುಳ್ಯ ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಮೂಲ ಪ್ರಕರಣದ ತನಿಖೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಶ್ರೀನಿವಾಸ್ ವಿರುದ್ಧದ ಪ್ರಕರಣವನ್ನು ಪ್ರತ್ಯೇಕವಾಗಿ (ಸ್ಪ್ಲಿಟ್‌ಅಪ್) ನಡೆಸಲಾಯಿತು. ಪ್ರಕರಣದಲ್ಲಿ ಒಟ್ಟು 21 ಸಾಕ್ಷಿಗಳ ಪೈಕಿ 9 ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು.
ಆದರೆ, ಘಟನೆ ನಡೆದ ಸಮಯದಲ್ಲಿ ಆರೋಪಿ ಸ್ಥಳದಲ್ಲಿದ್ದ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಿಲ್ಲದಿರುವುದು ಹಾಗೂ ಸಾಕ್ಷಿಗಳ ಹೇಳಿಕೆಗಳಿಂದ ಆರೋಪಿಯೇ ಕೃತ್ಯ ಎಸಗಿದ್ದಾನೆ ಎಂಬುದನ್ನು ಸಂಶಯಾತೀತವಾಗಿ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ವಾದ-ವಿವಾದಗಳನ್ನು ಆಲಿಸಿದ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್ ಅವರು ಆ.31ರಂದು ಶ್ರೀನಿವಾಸ್ ಅವರನ್ನು ನಿರ್ದೋಷಿ ಎಂದು ಘೋಷಿಸಿ ಖುಲಾಸೆಗೊಳಿಸಿ ಆದೇಶಿಸಿದ್ದಾರೆ.
ಆರೋಪಿ ಪರವಾಗಿ ಪುತ್ತೂರಿನ ಕಜೆ ಲಾ ಚೇಂಬರ್ಸ್‌ನ ವಕೀಲ ಮಹೇಶ್ ಕತೆ ವಾದಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!