ಮಂಗಳೂರು: ಇ-ಸ್ವತ್ತು 2.0 ತಂತ್ರಾಂಶ ಜಾರಿಗೆ ಬಂದ ಬಳಿಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ನಮೂನೆ 11ಎ ಹಾಗೂ 11ಬಿ ಪಡೆಯುವ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಜನರು ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಸ್ಯೆಯನ್ನು ವಿಧಾನ ಪರಿಷತ್ ಅಧಿವೇಶನದಲ್ಲಿ ಪ್ರಶ್ನೆಗಳ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿದೆ. 2025ರ ಡಿಸೆಂಬರ್ 1ರಿಂದ ನಮೂನೆ 11ಎಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಒಟ್ಟು 1,84,222 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 1,53,795 ಅರ್ಜಿಗಳಿಗೆ ಮಾತ್ರ ಅನುಮೋದನೆ ನೀಡಲಾಗಿದೆ. ಇನ್ನೂ 23,802 ಅರ್ಜಿಗಳು ಅನುಮೋದನೆಗೆ ಬಾಕಿ ಉಳಿದಿವೆ ಎಂದು ಸರ್ಕಾರವೇ ವಿಧಾನ ಪರಿಷತ್‌ನಲ್ಲಿ ಮಾಹಿತಿ ನೀಡಿದೆ ಎಂದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 65 ಹಾಗೂ ಉಡುಪಿ ಜಿಲ್ಲೆಯಲ್ಲಿ 436 ಅರ್ಜಿಗಳು ಅನುಮೋದನೆಗೆ ಬಾಕಿ ಇವೆ ಎಂದು ಕಿಶೋರ್ ಕುಮಾರ್ ತಿಳಿಸಿದರು.ಈ ಹಿಂದೆ ನಮೂನೆ 9 ಮತ್ತು 11ಎಗೆ ಗ್ರಾಮ ಪಂಚಾಯಿತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅವರ ಅನುಮೋದನೆಯೇ ಅಂತಿಮವಾಗಿತ್ತು. ಆದರೆ ಇ-ಸ್ವತ್ತು 2.0 ಜಾರಿಯಾದ ಬಳಿಕ ಕಾರ್ಯನಿರ್ವಾಹಕ ಅಧಿಕಾರಿ (EO) ಅವರ ಹೆಚ್ಚುವರಿ ಅನುಮೋದನೆಯನ್ನು ಕಡ್ಡಾಯಗೊಳಿಸಿರುವುದರಿಂದ ಪ್ರಕ್ರಿಯೆ ಮತ್ತಷ್ಟು ಸಂಕೀರ್ಣವಾಗಿದೆ. ಇದೇ ರೀತಿ ನಮೂನೆ 11ಬಿ ಅನುಮೋದನಾ ಅಧಿಕಾರವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮಟ್ಟಕ್ಕೆ ವರ್ಗಾಯಿಸಿರುವುದರಿಂದ ಸಾರ್ವಜನಿಕರಿಗೆ ಅನಗತ್ಯ ವಿಳಂಬವಾಗುತ್ತಿದೆ ಎಂದು ಅವರು ಹೇಳಿದರು.ಹೆಚ್ಚುವರಿ ಅನುಮೋದನಾ ಹಂತಗಳನ್ನು ಕೈಬಿಟ್ಟು, ಈ ಹಿಂದೆ ಇದ್ದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ PDO ಮೂಲಕ ಪರಿಶೀಲನೆ ಹಾಗೂ ಅನುಮೋದನೆ ನೀಡುವ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.ಅರ್ಜಿದಾರರು ತಮ್ಮ ಅರ್ಜಿ ಯಾವ ಹಂತದಲ್ಲಿದೆ ಹಾಗೂ ಅರ್ಜಿ ತಿರಸ್ಕೃತವಾಗಿದ್ದರೆ ಅದಕ್ಕೆ ಕಾರಣವೇನು ಎಂಬುದನ್ನು ಆನ್‌ಲೈನ್‌ನಲ್ಲಿ ತಿಳಿದುಕೊಳ್ಳಲು ಸೂಕ್ತ ಟ್ರ್ಯಾಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಈ ಮೂಲಕ ಸಾರ್ವಜನಿಕರ ಕಚೇರಿ ಸುತ್ತಾಟ ತಪ್ಪಿಸಿ, ಇ-ಸ್ವತ್ತು ವ್ಯವಸ್ಥೆಯನ್ನು ಸರಳ ಹಾಗೂ ಪರಿಣಾಮಕಾರಿಯಾಗಿಸಬೇಕು ಎಂದು ಕಿಶೋರ್ ಕುಮಾರ್ ಆಗ್ರಹಿಸಿದರು.












