ಪುತ್ತೂರು: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕಾಸರಗೋಡು ನಿವಾಸಿ ಸತೀಶ (31) ಎಂಬಾತನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.ಬೆಟ್ಟಂಪಾಡಿ ನಿವಾಸಿ ಹಾಗೂ ದೇವಸ್ಥಾನದ ಆಡಳಿತ ಪದಾಧಿಕಾರಿ ವಿನೋದ್ ಕುಮಾರ್ ಬಿ. (44) ಅವರು ನೀಡಿದ ದೂರಿನಂತೆ, ಆ.25ರಂದು ಬೆಳಗ್ಗೆ ದೇವಸ್ಥಾನಕ್ಕೆ ತೆರಳಿದಾಗ ಹೊರಗಡೆ ಇಟ್ಟಿದ್ದ ಕಾಣಿಕೆ ಡಬ್ಬಿ ನಾಪತ್ತೆಯಾಗಿತ್ತು. ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆ.24ರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಕಾಣಿಕೆ ಡಬ್ಬಿಯನ್ನು ಎತ್ತಿಕೊಂಡು ಹೋಗಿರುವುದು ಕಂಡುಬಂದಿತ್ತು. ಡಬ್ಬಿಯಲ್ಲಿ ಸುಮಾರು ₹4,500 ಹಣವಿದ್ದು, ಡಬ್ಬಿಯ ಮೌಲ್ಯ ₹2,500 ಎಂದು ದೂರಿನಲ್ಲಿ ತಿಳಿಸಲಾಗಿತ್ತು.ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ. 110/2026, ಬಿಎನ್‌ಎಸ್ ಕಲಂ 305(e) ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.ಆರೋಪಿಯ ಪತ್ತೆಗಾಗಿ ತನಿಖಾ ತಂಡವು ಕೇರಳದ ಕಿನ್ನಿಂಗಾರು, ಬದಿಯಡ್ಕ ಹಾಗೂ ಆದೂರು ಸೇರಿದಂತೆ ವಿವಿಧೆಡೆ ತನಿಖೆ ನಡೆಸಿ, ಬದಿಯಡ್ಕದಲ್ಲಿ ಸತೀಶನನ್ನು ಬಂಧಿಸಿದೆ. ಆತನಿಂದ ಕಳವು ಮಾಡಲಾಗಿದ್ದ ಕಾಣಿಕೆ ಡಬ್ಬಿ ಹಾಗೂ ಕೃತ್ಯಕ್ಕೆ ಬಳಸಿದ್ದ ಅಂದಾಜು ₹1 ಲಕ್ಷ ಮೌಲ್ಯದ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಯ ವಿರುದ್ಧ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಅಡಿಕೆ ಕಳವು ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ತನಿಖಾ ತಂಡ: ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಅವರ ನಿರ್ದೇಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣೆಯ ಪ್ರಭಾರ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಗುಣಪಾಲ ಜೆ. ಹಾಗೂ ಸುಷ್ಮಾ ಜಿ. ಭಂಡಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಿಡಿಆರ್ ವಿಭಾಗದ ಸಂಪತ್ ಹಾಗೂ ದಿವಾಕರ್ ಸಹಕರಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!