ಮೂಡಬಿದ್ರೆ : ಹೋಟೆಲ್‌ನಲ್ಲಿ ಇಬ್ಬರು ಯುವಕರು ಹಾಗೂ ಯುವತಿಯರು ಕುಳಿತಿದ್ದ ವೇಳೆ ಕೆಲ ರೌಡಿ ಸ್ವಭಾವದ ವ್ಯಕ್ತಿಗಳು ಅವರನ್ನು ಬೆದರಿಸಿ, ವಾಗ್ವಾದ ನಡೆಸಿದ ಘಟನೆಗೆ ಸಂಬಂಧಿಸಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಘಟನೆ ಕುರಿತು ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿ, ಯುವತಿಗೆ ದೂರು ನೀಡುವಂತೆ ಸೂಚಿಸಿದ್ದರು. ಆದರೆ ಯುವತಿ ಹಾಗೂ ಆಕೆಯ ತಂದೆ ದೂರು ನೀಡಲು ನಿರಾಕರಿಸಿದ್ದಾರೆ. ಬಳಿಕ ಹೋಟೆಲ್ ಮಾಲೀಕರಿಗೂ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದರೂ, ಅವರೂ ದೂರು ನೀಡಲು ಮುಂದಾಗಿಲ್ಲ.ಈ ಹಿನ್ನೆಲೆಯಲ್ಲಿ ಪೊಲೀಸರು ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡು ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿಯಲ್ಲಿ ಕಂಡುಬಂದ ಘಟನೆ ಹಾಗೂ ವಾಗ್ವಾದದ ಆಧಾರದ ಮೇಲೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಸಿಸಿಟಿವಿಯಲ್ಲಿ ಆಡಿಯೋ ಲಭ್ಯವಿರದ ಕಾರಣ, ದೃಶ್ಯಾವಳಿಗಳಲ್ಲಿ ಕಂಡುಬಂದ ಅಡ್ಡಿಪಡಿಸುವಿಕೆ ಹಾಗೂ ವಾಗ್ವಾದದ ಆಧಾರದ ಮೇಲೆ ಸಂಬಂಧಿತ ಕಾನೂನು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.‘ಯುವತಿಯ ತಂದೆ ಹಾಗೂ ಹೋಟೆಲ್ ಮಾಲೀಕರು ಜವಾಬ್ದಾರಿ ಮತ್ತು ಧೈರ್ಯ ತೋರಿಸಿ ದೂರು ನೀಡಬೇಕಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಈಗಾಗಲೇ ಬಾಂಡ್‌ನಲ್ಲಿದ್ದು, ಮುಂದಿನ ಕಾನೂನು ಪ್ರಕ್ರಿಯೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.













