ಪುತ್ತೂರು: ಆ.31ರಂದು ನಡೆದ ‘ಪುತ್ತೂರು ಚಲೋ’ ಕಾರ್ಯಕ್ರಮದ ವೇಳೆ ದ್ವೇಷಪೂರಿತ ಘೋಷಣೆ ಹಾಗೂ ಪ್ರಚೋದನಕಾರಿ ಭಾಷಣ ಮಾಡಲಾಗಿದೆ ಎಂದು ಆರೋಪಿಸಿ ಮಾನವ ಬಂಧುತ್ವ ವೇದಿಕೆ ಪುತ್ತೂರು ವತಿಯಿಂದ ಪುತ್ತೂರು ಟೌನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.ಮಾನವ ಬಂಧುತ್ವ ವೇದಿಕೆಯ ಪ್ರಧಾನ ಸಂಚಾಲಕ ಅಮಳ ರಾಮಚಂದ್ರ ಅವರು ಠಾಣಾಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ, ಪುತ್ತೂರಿನ ದರ್ಬೆಯ ಜೆರಾಕ್ಸ್ ಅಂಗಡಿಯಲ್ಲಿ ನಡೆದ ಗಲಾಟೆಯನ್ನು ಕೋಮು ಸಂಘರ್ಷವಾಗಿ ಪರಿವರ್ತಿಸುವ ಉದ್ದೇಶದಿಂದ ‘ಪುತ್ತೂರು ಚಲೋ’ ಆಯೋಜಿಸಲಾಗಿದೆ ಎಂದು ಆರೋಪಿಸಿದ್ದಾರೆ.ಮೆರವಣಿಗೆಯ ವೇಳೆ ಕೆಲವರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಅವಹೇಳನಕಾರಿ ಹಾಗೂ ದ್ವೇಷಪೂರಿತ ಘೋಷಣೆಗಳನ್ನು ಕೂಗಿದ್ದಾರೆ. ಇದರಿಂದ ಕೋಮು ವೈಮನಸ್ಯಕ್ಕೆ ಕಾರಣವಾಗುವ ವಾತಾವರಣ ನಿರ್ಮಿಸುವ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಕಾರ್ಯಕ್ರಮದ ಬಳಿಕ ನಡೆದ ಸಭೆಯಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಪೊಲೀಸ್ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸ್ ಇಲಾಖೆ ಹಿಂದೂ ಸಂಘಟನೆಗಳನ್ನು ದಮನಿಸುತ್ತಿದೆ ಎಂಬ ರೀತಿಯಲ್ಲಿ ಮಾತನಾಡಿ, ಸಮಾಜದಲ್ಲಿ ಪೊಲೀಸ್ ಇಲಾಖೆಯ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡಿಸುವ ಪ್ರಯತ್ನ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಅಲ್ಲದೆ, ಶ್ರೀಕಾಂತ್ ಶೆಟ್ಟಿ ಅವರು ಹಿಂದಿನ ಸಂದರ್ಭಗಳಲ್ಲಿಯೂ ಕೋಮು ಪ್ರಚೋದಿತ ಭಾಷಣ ಮಾಡಿರುವ ಆರೋಪಗಳಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.ಪುತ್ತೂರು ಚಲೋ ಕಾರ್ಯಕ್ರಮದಲ್ಲಿ ದ್ವೇಷಪೂರಿತ ಘೋಷಣೆ ಕೂಗಿದವರ ವಿರುದ್ಧ, ಪ್ರಚೋದನಕಾರಿ ಭಾಷಣ ಮಾಡಿದ ಶ್ರೀಕಾಂತ್ ಶೆಟ್ಟಿ ಹಾಗೂ ಕಾರ್ಯಕ್ರಮ ಸಂಘಟಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.ಈ ಸಂದರ್ಭದಲ್ಲಿ ಅಮಳ ರಾಮಚಂದ್ರ, ಎಚ್. ಮಹಮ್ಮದ್ ಆಲಿ, ಮೌರಿಸ್ ಮಸ್ಕ್ಯಾರೇನಸ್, ಉಲ್ಲಾಸ್ ಕೋಟ್ಯಾನ್, ಅಮರನಾಥ್ ಗೌಡ ಹಾಗೂ ರಿಯಾಜ್ ಪರ್ಲಡ್ಕ ಉಪಸ್ಥಿತರಿದ್ದರು.













