ಪುತ್ತೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಅತ್ತೆಗೆ ಹರಿತವಾದ ಸಾಧನದಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವ ಘಟನೆ ಸೆ.6ರಂದು ಮಧ್ಯಾಹ್ನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿ ನಡೆದಿದೆ.ಮುಕ್ಕೂರು ನಿವಾಸಿ ಗಣೇಶ (38) ಹಲ್ಲೆ ನಡೆಸಿದ ಆರೋಪಿ ಎನ್ನಲಾಗಿದೆ. ಹಲ್ಲೆಯಿಂದ ಆತನ ಪತ್ನಿ ವಿನಿತಾ (32) ಹಾಗೂ ಆಕೆಯ ತಾಯಿ ಕುಸುಮಾ (50) ರಕ್ತಗಾಯಗೊಂಡಿದ್ದಾರೆ.ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇಬ್ಬರಿಗೂ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದೇ ವೇಳೆ ಆರೋಪಿ ಗಣೇಶ ಇಲಿ ಪಾಷಾಣ ಸೇವಿಸಿದ್ದು, ಆತನನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆಗೆ ಸಂಬಂಧಿಸಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.













