ಬೆಳ್ತಂಗಡಿ: ಬಾಗಲಕೋಟೆಯಲ್ಲಿ ಇತ್ತೀಚೆಗೆ ಪತ್ತೆಯಾದ ಸುಮಾರು ₹5.5 ಕೋಟಿ ಮೌಲ್ಯದ ಎಂಡಿಎಂಎ (MDMA) ಮಾದಕ ವಸ್ತು ವಶಪಡಿಸಿಕೊಂಡ ಪ್ರಕರಣದಲ್ಲಿ ಈಗಾಗಲೇ ಮೂವರನ್ನು ಬಂಧಿಸಿರುವ ಪೊಲೀಸರು, ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಬೆಳ್ತಂಗಡಿ ತಾಲೂಕಿನ ಆಂಬುಲೆನ್ಸ್ ಚಾಲಕ ಜಲೀಲ್ @ ಬಾಬಾ (42) ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಮಂಗಳೂರು ನಗರ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.ಪ್ರಕರಣದ ತನಿಖೆ ವೇಳೆ ಮಂಗಳೂರು ನಗರದ ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಸಮೀಪದ ಮನೆಯಲ್ಲಿ ಜೂನ್ 25ರಂದು ನಡೆದ ದಾಳಿಯಲ್ಲಿ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನಿಂದ 15.17 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದ ಮುಂದುವರಿದ ತನಿಖೆಯಲ್ಲಿ ದೆಹಲಿಯಿಂದ ಎಂಡಿಎಂಎ ಖರೀದಿಸಿ ಬೆಂಗಳೂರಿಗೆ ಸಾಗಿಸುತ್ತಿದ್ದ ಜಾಲದ ಬಗ್ಗೆ ಮಾಹಿತಿ ಲಭಿಸಿತ್ತು.ಈ ಹಿನ್ನೆಲೆಯಲ್ಲಿ ಜುಲೈ 15ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪದ ರಾಷ್ಟ್ರೀಯ ಹೆದ್ದಾರಿಯ ರಾಯಲ್ ಇನ್ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿ, ಸುಮಾರು 5 ಕೆಜಿ 196 ಗ್ರಾಂ ಎಂಡಿಎಂಎ, ಕಾರು, ಬ್ಯಾಗ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದರು. ವಶಪಡಿಸಿಕೊಂಡ ಮಾದಕ ವಸ್ತುವಿನ ಅಂದಾಜು ಮೌಲ್ಯ ₹5.5 ಕೋಟಿ ಎಂದು ತಿಳಿಸಲಾಗಿದೆ.ಪ್ರಮುಖ ಆರೋಪಿ ಮೊಹಮ್ಮದ್ ಅಲ್ತಾಫ್ ವಿರುದ್ಧ ಈ ಹಿಂದೆ 2024ರಲ್ಲಿ ಕೊಣಾಜೆ ಪೊಲೀಸ್ ಠಾಣೆ ಹಾಗೂ 2026ರಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಪ್ರಕರಣದಲ್ಲಿ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಮೊಹಮ್ಮದ್ ಅಲ್ತಾಫ್ (28), ಲಾಯಿಲ ಗ್ರಾಮದ ಮೊಹಮ್ಮದ್ ಮುಸ್ತಫಾ (28), ಇಂದಬೆಟ್ಟು ಗ್ರಾಮದ ದೇವನಾರಿ ನಿವಾಸಿ ಅಲ್ಫಾಜ್, ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು (26) ಹಾಗೂ ಜಲೀಲ್ @ ಬಾಬಾ ವಿರುದ್ಧ ಪ್ರಕರಣ ದಾಖಲಾಗಿದೆ. ಅಣ್ಣಪ್ಪ ಸ್ವಾಮಿಯನ್ನು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಮಂಗಳೂರು ನಗರ ಸಿಸಿಬಿ ಪೊಲೀಸರು ಜುಲೈ 16ರಂದು ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ, ಜಲೀಲ್ @ ಬಾಬಾ ಬಂಧನ ಬಾಕಿ ಇರುವ ನಾಲ್ಕನೇ ಆರೋಪಿ ಎಂದು ಉಲ್ಲೇಖಿಸಿದ್ದಾರೆ.ತನಿಖೆ ಪ್ರಕಾರ, ಬಂಧಿತರಿಂದ ಎಂಡಿಎಂಎ ಪಡೆದು ತನ್ನ ಆಂಬುಲೆನ್ಸ್ ವಾಹನದ ಮೂಲಕ ಜಿಲ್ಲೆಯ ಯುವಕರು, ವೈದ್ಯರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಜಾಲದಲ್ಲಿ ಜಲೀಲ್ @ ಬಾಬಾ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಮೂವರು ಆರೋಪಿಗಳ ಬಂಧನದ ಬಳಿಕ ಆತ ತನ್ನ ಎರಡು ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಗೆ ಆಶ್ರಯ ಅಥವಾ ನೆರವು ನೀಡುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಸಿಬಿ ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!