ಕಡಬ: ಕಡಬ ಠಾಣಾ ವ್ಯಾಪ್ತಿಯ ಅಂಬೇಡ್ಕರ್ ಭವನದಲ್ಲಿ ‘KINGS Bazaar’ ಸಂಸ್ಥೆಯ ಹೆಸರಿನಲ್ಲಿ ಅಕ್ರಮ ಹಣಪರಿಚಲನೆ ಯೋಜನೆ ನಡೆಸುತ್ತಿದ್ದ ಆರೋಪದಡಿ ಏಳು ಮಂದಿ ವಿರುದ್ಧ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಸಾರ್ವಜನಿಕರಿಗೆ ಶೀಘ್ರವಾಗಿ ಹಣ ಗಳಿಸುವ ಅವಕಾಶ, ಹೆಚ್ಚಿನ ಬೆಲೆಯ ವಸ್ತುಗಳನ್ನು ಕಡಿಮೆ ದರದಲ್ಲಿ ಪಡೆಯುವ ಅವಕಾಶ ಹಾಗೂ ಯೋಜನೆಗೆ ಇತರರನ್ನು ಸೇರ್ಪಡೆಗೊಳಿಸಿದರೆ ಕಮಿಷನ್ ಪಡೆಯಬಹುದು ಎಂದು ಭರವಸೆ ನೀಡಿ ಹಣ ಸಂಗ್ರಹಿಸಲಾಗುತ್ತಿತ್ತು ಎನ್ನಲಾಗಿದೆ.ಈ ಮೂಲಕ ನಿಷೇಧಿತ ಹಣಪರಿಚಲನೆ ಯೋಜನೆ ನಡೆಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಹಾವೇರಿ ಮೂಲದ KINGS Bazaar ಸಂಸ್ಥೆ ಹಾಗೂ ಅದರ ಮಾಲೀಕರು ಸೇರಿದಂತೆ ಸ್ಥಳೀಯವಾಗಿ ಯೋಜನೆ ನಡೆಸುತ್ತಿದ್ದ ಬೆಳ್ತಂಗಡಿ ಕೊಕ್ಕಡ ನಿವಾಸಿಗಳಾದ ಸುಬ್ರಹ್ಮಣ್ಯ ಶಗ್ರಿತ್ತಾಯ (50), ಗುರುಮೂರ್ತಿ (54), ಕಡಬ ಬಿಳಿನೆಲೆ ನಿವಾಸಿಗಳಾದ ಸುರೇಶ್ ಆರ್.ಎಸ್. (55), ಕಿರಣ್ ಕುಮಾರ್ (21), ಶ್ರೀನಾಥ್ (48), ಕಡಬ ಕೌಕ್ರಾಡಿ ನಿವಾಸಿ ಬಾಲಕೃಷ್ಣ ಪಿ.ಹೆಚ್. (42) ಹಾಗೂ ಪುತ್ತೂರು ನಿವಾಸಿ ಸಂದೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಕಡಬ ಠಾಣೆಯಲ್ಲಿ ಅ.ಕ್ರ. 100/2026ರಂತೆ Prize Chits and Money Circulation Schemes (Banning) Act, 1978ರ ಕಲಂ 4, 5 ಮತ್ತು 6ರ ಅಡಿಯಲ್ಲಿ ಸ್ವಪಿರ್ಯಾದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.












