ಮಂಗಳೂರು: ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಉಪ ಪೊಲೀಸ್ ಆಯುಕ್ತರಾಗಿ (ಡಿಸಿಪಿ) ಸ್ಯಾಮ್ ವರ್ಗೀಸ್ ಅವರನ್ನು ರಾಜ್ಯ ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ.ಬೆಂಗಳೂರಿನ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಪೊಲೀಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ಯಾಮ್ ವರ್ಗೀಸ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಂಗಳೂರು ನಗರ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹುದ್ದೆಗೆ ವರ್ಗಾಯಿಸಲಾಗಿದೆ.ಈ ಹಿಂದೆ ಮಂಗಳೂರು ನಗರ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆಗಿದ್ದ ಮಿಥುನ್ ಎಚ್.ಎನ್. ಅವರನ್ನು ಇತ್ತೀಚೆಗೆ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ವರ್ಗಾಯಿಸಲಾಗಿತ್ತು. ತೆರವಾಗಿದ್ದ ಹುದ್ದೆಗೆ ಇದೀಗ ಸ್ಯಾಮ್ ವರ್ಗೀಸ್ ಅವರನ್ನು ನೇಮಕ ಮಾಡಲಾಗಿದೆ.ಮೂಲತಃ ಕೇರಳದ ಕೊಟ್ಟಾಯಂನವರಾದ ಸ್ಯಾಮ್ ವರ್ಗೀಸ್ ಅವರು 2022ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ. ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಉಪವಿಭಾಗದ ಎಎಸ್‌ಪಿಯಾಗಿ ಪೊಲೀಸ್ ಸೇವೆ ಆರಂಭಿಸಿದ ಅವರು, ಬಳಿಕ ಬೆಂಗಳೂರಿನ ಅಪರಾಧ ತನಿಖಾ ಇಲಾಖೆಯಲ್ಲಿ ಪೊಲೀಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು.













