ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕೈದಿಗಳು ನಿಷೇಧಿತ ಮೊಬೈಲ್ ಫೋನ್‌ಗಳನ್ನು ಬಳಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಸೆ.8ರ ರಾತ್ರಿ ಕಾರಾಗೃಹಕ್ಕೆ ದಾಳಿ ನಡೆಸಿ 10 ಮೊಬೈಲ್ ಸ್ಮಾರ್ಟ್‌ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಅ.ಕ್ರ. 82/2026, ಕಲಂ 323 ಬಿಎನ್‌ಎಸ್ ಹಾಗೂ ಕಲಂ 42 ಕರ್ನಾಟಕ ಕಾರಾಗೃಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಅನಿರೀಕ್ಷಿತವಾಗಿ ದಾಳಿ ನಡೆಸಿ ವಿವಿಧೆಡೆ ತಪಾಸಣೆ ನಡೆಸಿದಾಗ, ಎ-ಬ್ಲಾಕ್‌ನಲ್ಲಿದ್ದ ಕೈದಿಗಳ ಪೈಕಿ ರಿಫತ್ ಅಲಿ, ಇಬ್ರಾಹಿಂ ಖಲೀಲ್, ಅಸ್ಫಕ್ ಅಲಿಯಾಸ್ ಜುಟ್ಟು ಅಸ್ಫಕ್, ಅರ್ಷದ್, ದಾವುದ್ ಫರ್ವೇಜ್, ನಝರತ್ ಅಲಿ, ಶಿಫಾನ್, ಅಬ್ದುಲ್ ಸಾದೀಕ್ ಹಾಗೂ ಅರ್ಫಜ್ ಎಂಬ 9 ಕೈದಿಗಳಿಂದ ಒಟ್ಟು 10 ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ.ಆರೋಪಿಗಳ ಪೈಕಿ ಮೊದಲ ನಾಲ್ವರು ಇತ್ತೀಚೆಗೆ ತೊಕ್ಕೊಟ್ಟು ಬಳಿ ನಡೆದ ಅರೀಫ್ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. 5ರಿಂದ 8ನೇ ಕೈದಿಗಳು ಎನ್‌ಡಿಪಿಎಸ್ ಪ್ರಕರಣಗಳಲ್ಲಿನ ಡ್ರಗ್ ಪೆಡ್ಲರ್ ಆರೋಪಿಗಳಾಗಿದ್ದು, 9ನೇ ಕೈದಿ ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿರುವ ಕೋಕಾ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳನ್ನು ಕೈದಿಗಳಿಗೆ ಹೇಗೆ ಪೂರೈಸಲಾಯಿತು, ಅವುಗಳ ಬಳಕೆ ಸೇರಿದಂತೆ ಪ್ರಕರಣದ ಇತರ ಆಯಾಮಗಳ ಕುರಿತು ಬರ್ಕೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.













