ಪುತ್ತೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ಅಧ್ಯಾಪಕ ಭೂಷಣ ಹಾಗೂ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಜಿಡಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಅವರನ್ನು ನಯಾ ಚಪ್ಪಲ್ ಬಜಾರ್ ವತಿಯಿಂದ ಸೆ.5ರಂದು ದರ್ಬೆಯ ಬುಶ್ರಾ ಕಾಂಪ್ಲೆಕ್ಸ್‌ನಲ್ಲಿರುವ ಮಳಿಗೆಯಲ್ಲಿ ಸನ್ಮಾನಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಹಾಗೂ ರೋಟರಿ ಕ್ಲಬ್ ಪುತ್ತೂರು ಸದಸ್ಯ ವಾಲ್ಟರ್ ಡಿ’ಮೆಲ್ಲೋ ಮಾತನಾಡಿ, ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಪ್ರೊ. ಸುಬ್ಬಪ್ಪ ಕೈಕಂಬ ಅವರನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಶಿಕ್ಷಣ ಕ್ಷೇತ್ರದಲ್ಲಿ 12 ವರ್ಷಗಳ ಸೇವೆ ಸಲ್ಲಿಸಿರುವ ಅವರು ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಕಾರ್ಯವೈಖರಿಯನ್ನು ಹೊರಜಗತ್ತಿಗೆ ತೋರಿಸಿಕೊಟ್ಟಿರುವುದರಿಂದಲೇ ಪ್ರಶಸ್ತಿಗಳು ಲಭಿಸಿವೆ ಎಂದು ಹೇಳಿದರು.ರೋಟರಿ ಕ್ಲಬ್ ಪುತ್ತೂರು ಹಿರಿಯ ಸದಸ್ಯ ಹಾಗೂ ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ ಮಾತನಾಡಿ, ಶಿಕ್ಷಣ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರೊ. ಸುಬ್ಬಪ್ಪ ಕೈಕಂಬ ಅವರು ಸಲ್ಲಿಸಿರುವ ಪ್ರಾಮಾಣಿಕ ಸೇವೆಗೆ ಅಧ್ಯಾಪಕ ಭೂಷಣ ಹಾಗೂ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳು ಸಂದ ಗೌರವವಾಗಿದೆ. ಅವರ ಪಾಠ ಪ್ರವಚನಗಳು ಅತ್ಯುತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರ ಪ್ರಶಸ್ತಿಯೂ ಲಭಿಸಲಿ ಎಂದು ಹಾರೈಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ಸುಬ್ಬಪ್ಪ ಕೈಕಂಬ, ತಾನು ಯಾವುದೇ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿಲ್ಲ ಅಥವಾ ಯಾರ ಮೇಲೂ ಪ್ರಭಾವ ಬೀರಿಲ್ಲ. ಪ್ರಶಸ್ತಿ ಸಮಿತಿಯವರು ಕೇಳಿಕೊಂಡಂತೆ ತನ್ನ ಬಯೋಡೇಟಾವನ್ನು ಪರಿಶೀಲನಾ ಸಮಿತಿಗೆ ಕಳುಹಿಸಿದ್ದೆ. ಪ್ರಶಸ್ತಿ ದೊರೆಯಲು ತನ್ನ ಹೆತ್ತವರು ಹಾಗೂ ತನಗೆ ವಿದ್ಯೆ ಕಲಿಸಿದ ಶಿಕ್ಷಕರೇ ಪ್ರಮುಖ ಕಾರಣಕರ್ತರು. ಆದ್ದರಿಂದ ಪ್ರಶಸ್ತಿಯನ್ನು ಅವರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು. ತನ್ನನ್ನು ಗುರುತಿಸಿ ಸನ್ಮಾನಿಸಿದ ನಯಾ ಚಪ್ಪಲ್ ಬಜಾರ್ ಮಾಲಕ ರಫೀಕ್ ಎಂ.ಜಿ. ಅವರಿಗೆ ಕೃತಜ್ಞತೆ ಸಲ್ಲಿಸಿದರು.ಈ ಸಂದರ್ಭದಲ್ಲಿ ನಯಾ ಚಪ್ಪಲ್ ಬಜಾರ್‌ನಲ್ಲಿ ಸುಮಾರು 20 ವರ್ಷಗಳಿಂದ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಶಾಂತ್ ಅವರು, ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ತನಗೆ ಬೋಧಿಸಿದ್ದ ಪ್ರೊ. ಸುಬ್ಬಪ್ಪ ಕೈಕಂಬ ಅವರಿಗೆ ಶಾಲು ಹೊದಿಸಿ ಗೌರವಾರ್ಪಣೆ ಸಲ್ಲಿಸಿದರು.ನಯಾ ಚಪ್ಪಲ್ ಬಜಾರ್ ಮಾಲಕ ರಫೀಕ್ ಎಂ.ಜಿ. ಮಾತನಾಡಿ, ಕಾರ್ಮಿಕರ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ, ಸೈನಿಕರ ದಿನಾಚರಣೆ, ಕಾರ್ಗಿಲ್ ವಿಜಯೋತ್ಸವ, ವೈದ್ಯರ ದಿನಾಚರಣೆ, ಪತ್ರಕರ್ತರ ದಿನಾಚರಣೆ ಸೇರಿದಂತೆ ವಿವಿಧ ದಿನಾಚರಣೆಗಳನ್ನು ಮಳಿಗೆಯಲ್ಲಿ ಆಚರಿಸಲಾಗುತ್ತಿದೆ. ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಪ್ರೊ. ಸುಬ್ಬಪ್ಪ ಕೈಕಂಬ ಅವರನ್ನು ಸನ್ಮಾನಿಸಲು ಸಂತೋಷವಾಗುತ್ತಿದೆ ಎಂದರು.ರೋಟರಿ ಕ್ಲಬ್ ಪುತ್ತೂರು ನಿಕಟಪೂರ್ವ ಅಧ್ಯಕ್ಷ ಡಾ. ಶ್ರೀಪ್ರಕಾಶ್ ಬಿ., ಪೂರ್ವಾಧ್ಯಕ್ಷ ವಾಮನ್ ರೈ, ಸದಸ್ಯರಾದ ವಿಶ್ವನಾಥ ಗೌಡ, ಇಸ್ಮಾಯಿಲ್, ಹೆರಾಲ್ಡ್ ಮಾಡ್ತಾ ಹಾಗೂ ಸುಜಿತ್ ಡಿ. ರೈ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಸದಸ್ಯ ಮನೋಜ್ ಟಿ.ವಿ. ಸನ್ಮಾನಿತರ ಪರಿಚಯ ಮಾಡಿದರು. ರಫೀಕ್ ಎಂ.ಜಿ. ಸ್ವಾಗತಿಸಿ ವಂದಿಸಿದರು. ರೋಟರಿ ಕ್ಲಬ್ ಪುತ್ತೂರು ಮಾಜಿ ಕಾರ್ಯದರ್ಶಿ ಪರಮೇಶ್ವರ ಗೌಡ ಕಾರ್ಯಕ್ರಮ ನಿರೂಪಿಸಿದರು. ನಯಾ ಚಪ್ಪಲ್ ಬಜಾರ್ ಸಿಬ್ಬಂದಿ ಸಹಕರಿಸಿದರು.













