ಬೆಳ್ತಂಗಡಿ: ಗುಡ್ಡ ಪ್ರದೇಶದಲ್ಲಿ ಕೋಳಿಗಳ ಕಾಲಿಗೆ ಬಾಳು ಕಟ್ಟಿ ಹಣವನ್ನು ಪಣವಾಗಿರಿಸಿ ಕೋಳಿ ಅಂಕ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಗುಂಡೂರಿನಲ್ಲಿ ನಡೆದಿದೆ.ಬೆಳ್ತಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಿಕಂದರ್ ಪಾಷಾ ಹಾಗೂ ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಕಡಿರುದ್ಯಾವರ ಮತ್ತು ಇಂದಬೆಟ್ಟು ಗ್ರಾಮದ ಬೀಟ್ ಸಿಬ್ಬಂದಿ ನೀಡಿದ ಮಾಹಿತಿಯ ಆಧಾರದಲ್ಲಿ ಗುಂಡೂರಿನ ಅಣ್ಣು ಗೌಡರಿಗೆ ಸೇರಿದ ಗುಡ್ಡ ಜಾಗದಲ್ಲಿ ದಾಳಿ ನಡೆಸಲಾಗಿದೆ.ಪೊಲೀಸರು ಸ್ಥಳಕ್ಕೆ ತೆರಳಿ ದೂರದಿಂದ ಗಮನಿಸಿದಾಗ ಇಬ್ಬರು ಕೋಳಿಗಳ ಕಾಲಿಗೆ ಬಾಳು ಕಟ್ಟಿ ಎದುರುಬದುರು ಹಾರಿಸಿ ಹಣವನ್ನು ಪಣವಾಗಿರಿಸಿ ಕೋಳಿ ಅಂಕ ನಡೆಸುತ್ತಿರುವುದು ಕಂಡುಬಂದಿದೆ. ಪೊಲೀಸರು ಬರುತ್ತಿರುವುದನ್ನು ಗಮನಿಸಿದ ಕೆಲವರು ಕೋಳಿಗಳೊಂದಿಗೆ ಪರಾರಿಯಾಗಿದ್ದು, ಸಿಬ್ಬಂದಿ ಹಿಂಬಾಲಿಸಿ ಐವರನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತರನ್ನು ತಿಮ್ಮಯ್ಯ ಗೌಡ (59), ರಾಘವೇಂದ್ರ (37), ಉಮೇಶ್ (26), ಬಾಲಕೃಷ್ಣ ಗೌಡ (58) ಹಾಗೂ ಭವಿತ್ (24) ಎಂದು ಗುರುತಿಸಲಾಗಿದೆ.ಸ್ಥಳದಲ್ಲಿ ಮೂರು ಕೋಳಿಗಳು ಹಾಗೂ ಸಣ್ಣ ಕತ್ತಿ ಪತ್ತೆಯಾಗಿದ್ದು, ಕೋಳಿಗಳ ಒಟ್ಟು ಅಂದಾಜು ಮೌಲ್ಯ ₹1,800 ಹಾಗೂ ಕತ್ತಿಯ ಮೌಲ್ಯ ₹50 ಎಂದು ತಿಳಿಸಲಾಗಿದೆ. ಅಲ್ಲದೆ, ಆರೋಪಿಗಳ ಬಳಿಯಿಂದ ಕೋಳಿ ಅಂಕಕ್ಕೆ ಬಳಸಿದ್ದರೆನ್ನಲಾದ ಒಟ್ಟು ₹3,400 ನಗದು ವಶಪಡಿಸಿಕೊಳ್ಳಲಾಗಿದೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 102/2026ರಲ್ಲಿ ಕೆಪಿ ಆಕ್ಟ್ ಕಲಂ 87, ಪ್ರಿವೆನ್ಷನ್ ಆಫ್ ಅನಿಮಲ್ ಕ್ರುಯೆಲ್ಟಿ ಆಕ್ಟ್ ಕಲಂ 11(1)(a)(n) ಹಾಗೂ BNS 2023ರ ಕಲಂ 112 r/w 3(5)ರಂತೆ ಪ್ರಕರಣ ದಾಖಲಾಗಿದೆ.













