ತಿರುವನಂತಪುರಂ: ಕೊಚ್ಚಿಯಿಂದ ಅಬುಧಾಬಿಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಬೋಯಿಂಗ್ 737 ವಿಮಾನದ ಎಂಜಿನ್‌ನಲ್ಲಿ ದಿಢೀರ್ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೈಲಟ್‌ನ ಸಮಯಪ್ರಜ್ಞೆಯಿಂದ ಸಂಭವನೀಯ ಅಪಾಯವೊಂದು ತಪ್ಪಿದೆ.ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ IX 415 ವಿಮಾನ ಟೇಕ್‌ಆಫ್ ಆದ ಸುಮಾರು 50 ನಿಮಿಷಗಳ ಬಳಿಕ 36,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಎಂಜಿನ್‌-1ರಲ್ಲಿ ತೈಲದ ಪ್ರಮಾಣ ವೇಗವಾಗಿ ಕುಸಿಯುತ್ತಿರುವುದು ಪೈಲಟ್ ಹಾಗೂ ಸಹ ಪೈಲಟ್ ಗಮನಕ್ಕೆ ಬಂದಿದೆ.ಹಾರಾಟ ಮುಂದುವರಿದಂತೆ ಎಂಜಿನ್‌ನ ತೈಲದ ಒತ್ತಡ ಅಪಾಯದ ಮಟ್ಟಕ್ಕೆ ಇಳಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎಂಜಿನ್‌-1 ಅನ್ನು ಸ್ಥಗಿತಗೊಳಿಸಲಾಯಿತು. ತೈಲದ ಪ್ರಮಾಣ ಅಪಾಯದ ವಲಯವನ್ನು ಮೀರಿಸುವ ಮುನ್ನವೇ ಎಂಜಿನ್ ಸ್ಥಗಿತಗೊಳಿಸಿದ ಪೈಲಟ್, ವಿಮಾನವನ್ನು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿಸಿದರು.ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಘಟನೆಯಿಂದ ಯಾವುದೇ ಪ್ರಯಾಣಿಕರಿಗೆ ಗಾಯವಾಗಿರುವ ಬಗ್ಗೆ ವರದಿಯಾಗಿಲ್ಲ.ವಿಮಾನವನ್ನು ಇದೀಗ ತಾಂತ್ರಿಕ ತಪಾಸಣೆಗೆ ಒಳಪಡಿಸಲಾಗಿದ್ದು, ಎಂಜಿನ್‌ನಲ್ಲಿ ತೈಲದ ಪ್ರಮಾಣ ದಿಢೀರ್ ಕುಸಿಯಲು ಕಾರಣವೇನು ಎಂಬುದನ್ನು ಪರಿಶೀಲಿಸಲಾಗುತ್ತಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!