ಉಳ್ಳಾಲ, ಸೆ.7: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಹೆಸರು ಎಸ್‌ಐಆರ್‌ (SIR) ಪ್ರಕ್ರಿಯೆಯಲ್ಲಿ ತಾಳೆಯಾಗದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗಿದ್ದು, ಬಳಿಕ ಸಂಬಂಧಪಟ್ಟ ಅಧಿಕಾರಿಗಳು ನೋಟಿಸ್‌ನ್ನು ವಾಪಸ್ ಪಡೆದ ಘಟನೆ ಸೋಮವಾರ ನಡೆದಿದೆ.2002ರ ಮತದಾರರ ಪಟ್ಟಿಯಲ್ಲಿ ಹಾಜಬ್ಬರ ಹೆಸರು ‘ಹಾಜಬ್ಬ’ ಎಂದು ಮಾತ್ರ ದಾಖಲಾಗಿತ್ತು. ಆದರೆ ಪ್ರಸ್ತುತ ಆಧಾರ್, ರೇಷನ್ ಕಾರ್ಡ್, ಪಾಸ್‌ಪೋರ್ಟ್ ಹಾಗೂ ಮತದಾರರ ಗುರುತಿನ ಚೀಟಿ ಸೇರಿದಂತೆ ಇತರ ದಾಖಲೆಗಳಲ್ಲಿ ‘ಹರೇಕಳ ಹಾಜಬ್ಬ’ ಎಂದು ನಮೂದಿಸಲಾಗಿದೆ. ಹಳೆಯ ಮತದಾರರ ಪಟ್ಟಿಯಲ್ಲಿನ ಹೆಸರು ಹಾಗೂ ಪ್ರಸ್ತುತ ದಾಖಲೆಗಳಲ್ಲಿನ ಹೆಸರು ಹೊಂದಿಕೆಯಾಗದ ಹಿನ್ನೆಲೆಯಲ್ಲಿ ಎಸ್‌ಐಆರ್‌ ಪ್ರಕ್ರಿಯೆಯಡಿ ನೋಟಿಸ್ ನೀಡಲಾಗಿತ್ತು ಎನ್ನಲಾಗಿದೆ.ಸೆ.11ರಂದು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯತ್‌ಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಸೋಮವಾರ ಬೆಳಗ್ಗೆ ಇಬ್ಬರು ಅಂಗನವಾಡಿ ಶಿಕ್ಷಕಿಯರು ಹಾಜಬ್ಬರ ಮನೆಗೆ ಬಂದು ನೋಟಿಸ್ ನೀಡಿದ್ದರು ಎಂದು ಹಾಜಬ್ಬ ತಿಳಿಸಿದ್ದಾರೆ.ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಜಬ್ಬರ ಮನೆಗೆ ಭೇಟಿ ನೀಡಿ ನೋಟಿಸ್‌ನ್ನು ವಾಪಸ್ ಪಡೆದಿದ್ದಾರೆ. ಅಲ್ಲದೆ, ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಈ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿ ತೆರಳಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ಹರೇಕಳ ಹಾಜಬ್ಬ, “ಬೆಳಗ್ಗೆ ಸುಮಾರು 11 ಗಂಟೆಗೆ ಇಬ್ಬರು ಅಂಗನವಾಡಿ ಶಿಕ್ಷಕಿಯರು ಮನೆಗೆ ಬಂದು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದರು. ಶುಕ್ರವಾರ ಪಂಚಾಯತ್‌ಗೆ ಅಗತ್ಯ ದಾಖಲೆಗಳೊಂದಿಗೆ ಬರುವಂತೆ ತಿಳಿಸಿದ್ದರು. ಬಳಿಕ ಮಧ್ಯಾಹ್ನ ಪಂಚಾಯತ್‌ನಿಂದ ಅಧಿಕಾರಿಗಳು ಬಂದು ನೋಟಿಸ್‌ನ್ನು ಹಿಂಪಡೆದು, ಪರಿಶೀಲಿಸಿ ಬರುತ್ತೇವೆ ಎಂದು ಹೇಳಿದ್ದಾರೆ” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!