ಪುತ್ತೂರು: ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಉಲಾಯಿ–ಪಿದಾಯಿ ಜೂಜಾಟ ಆಡುತ್ತಿದ್ದ ಐವರನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಅ. 20ರಂದು ಸಂಜೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಸವಣೂರು ಕುವತ್ತೋಡಿ ಎಂಬಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಈರಯ್ಯ ಡಿ.ಎನ್. ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ, ಜೂಜಾಟದಲ್ಲಿ ತೊಡಗಿದ್ದ ಗುರವ, ಇಸೂಬು, ಕುಶಾಲಪ್ಪ, ತಾಜುದ್ದೀನ್ ಮತ್ತು ರಾಮಣ್ಣ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.ಜೂಜಾಟಕ್ಕೆ ಬಳಸಿದ್ದ ₹18,150 ನಗದು, ಇಸ್ಪೀಟು ಎಲೆಗಳು ಹಾಗೂ ಇತರ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 60/2026ರಂತೆ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.









