ಕಡಬ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅತ್ತೆಗೆ ಜೀವಬೆದರಿಕೆ ಹಾಕಿ, ಮನೆಯ ಕಿಟಕಿಯ ಗಾಜಿಗೆ ಕಲ್ಲೆಸೆದು ಹಾನಿ ಮಾಡಿದ ಆರೋಪದ ಮೇಲೆ ಸೊಸೆಯ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಡಬದ ಕೊಯಿಲ ನಿವಾಸಿ ನೀಲಮ್ಮ (70) ಅವರು ನೀಡಿದ ದೂರಿನ ಪ್ರಕಾರ, ಅವರ ಸೊಸೆ ಮಂಗಳಾ ಬಾಯಿ ಅ. 12ರಂದು ಸಂಜೆ ಪಿರ್ಯಾದಿದಾರರ ಮನೆಗೆ ಬಂದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಜೀವಬೆದರಿಕೆ ಹಾಕಿದ್ದರೆನ್ನಲಾಗಿದೆ.ಮುಂದುವರಿದು, ಅ. 14ರಂದು ರಾತ್ರಿ ಮನೆಯ ಕಿಟಕಿಯ ಗಾಜಿಗೆ ಕಲ್ಲೆಸೆದು ಹಾನಿ ಮಾಡಿದ್ದು, ಇದರಿಂದ ಸುಮಾರು ₹30,000 ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ಕಲ್ಲು ತಾಗಿ ನೀಲಮ್ಮ ಅವರಿಗೆ ಗಾಯವಾಗಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.ಗಾಯಗೊಂಡ ನೀಲಮ್ಮ ಅವರು ಕಡಬದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 118/2026ರಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 352, 351(2), 118(1) ಮತ್ತು 324(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.









