ಶಿವಮೊಗ್ಗ, ಅ.21: ದಸರಾ ಜಂಬೂಸವಾರಿ ಮೆರವಣಿಗೆಯ ವೇಳೆ ಅಂಬಾರಿ ಹೊತ್ತಿದ್ದ ಆನೆ ಬೆದರಿ ಓಡಿದ ಪರಿಣಾಮ, ಅದರ ಮೇಲಿದ್ದ ಬೆಳ್ಳಿ ಅಂಬಾರಿ ಕಳಚಿ ಕೆಳಗೆ ಬಿದ್ದ ಆತಂಕಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿ ವಿಗ್ರಹಕ್ಕೂ ಹಾನಿಯಾಗಿದೆ. ಘಟನೆಯಿಂದಾಗಿ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದ್ದು, ಜಂಬೂಸವಾರಿ ಮೆರವಣಿಗೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.ಶಿವಮೊಗ್ಗದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹಾಗೂ ಶಾಸಕ ಚನ್ನಬಸಪ್ಪ ಅವರು ಜಂಬೂಸವಾರಿಗೆ ಚಾಲನೆ ನೀಡಿದ್ದರು. ಮೆರವಣಿಗೆ ಸ್ವಲ್ಪ ದೂರ ಸಾಗುತ್ತಿದ್ದಂತೆ ಅಂಬಾರಿ ಹೊತ್ತಿದ್ದ ಸಕ್ರೆಬೈಲು ಆನೆ ಬಿಡಾರದ ಸೋಮಣ್ಣ ಆನೆ ಬೆದರಿ ನಿಯಂತ್ರಣ ತಪ್ಪಿ ಓಡಿದೆ.

ಅವಘಡದ ಹಿನ್ನೆಲೆಯಲ್ಲಿ ಶಿವಮೊಗ್ಗ ದಸರಾ ಜಂಬೂಸವಾರಿ ಮೆರವಣಿಗೆಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಯಿತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು, ಮೈಸೂರು ದಸರಾ ಮಾದರಿಯಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲೂ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಕನಿಷ್ಠ 20ರಿಂದ 30 ದಿನಗಳ ಕಾಲ ಕಡ್ಡಾಯ ತಾಲೀಮು ನೀಡುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.ನಾಲ್ಕನೇ ಬಾರಿ ಅಂಬಾರಿ ಮೆರವಣಿಗೆಗೆ ಅಡ್ಡಿಶಿವಮೊಗ್ಗ ದಸರಾ ಅಂಬಾರಿ ಮೆರವಣಿಗೆಗೆ ಆನೆಗಳ ಕಾರಣದಿಂದ ಅಡ್ಡಿಯಾಗುತ್ತಿರುವುದು ಇದು ನಾಲ್ಕನೇ ಬಾರಿ ಎನ್ನಲಾಗಿದೆ. 2019ರಲ್ಲಿ ಅಂಬಾರಿ ಹೊರಬೇಕಿದ್ದ ಸಾಗರ್ ಆನೆ ಅಸ್ವಸ್ಥಗೊಂಡಿದ್ದರಿಂದ ಅಂಬಾರಿಯನ್ನು ಲಾರಿಯಲ್ಲಿ ಮೆರವಣಿಗೆ ಮಾಡಲಾಗಿತ್ತು. 2021ರಲ್ಲಿ ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಆನೆಗಳಿಗೆ ಸೂಕ್ತ ತಾಲೀಮು ನಡೆಸಲು ಸಾಧ್ಯವಾಗದ ಕಾರಣ ಅಂಬಾರಿ ಮೆರವಣಿಗೆ ನಡೆದಿರಲಿಲ್ಲ. 2023ರಲ್ಲಿ ವಿಜಯದಶಮಿಯ ಹಿಂದಿನ ದಿನ ಕುಮ್ಮಿ ಆನೆ ನೇತ್ರಾವತಿ ಮರಿ ಹಾಕಿದ್ದರಿಂದ ಅಂಬಾರಿ ಮೆರವಣಿಗೆಯಲ್ಲಿ ಆನೆಯನ್ನು ಬಳಸಿರಲಿಲ್ಲ. ಇದೀಗ ಸೋಮಣ್ಣ ಆನೆ ಬೆದರಿ ಓಡಿದ ಪರಿಣಾಮ ಅಂಬಾರಿ ಕೆಳಗೆ ಬಿದ್ದು ಮತ್ತೊಮ್ಮೆ ಶಿವಮೊಗ್ಗ ದಸರಾ ಮೆರವಣಿಗೆಗೆ ಅಡ್ಡಿಯಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!