ಪುತ್ತೂರು: ಶ್ರೀ ಶಾರದಾ ಭಜನಾ ಮಂದಿರದ 92ನೇ ವರ್ಷದ ನವರಾತ್ರಿ ಉತ್ಸವದ ಅಂಗವಾಗಿ ಬುಧವಾರ ಸಂಜೆ ನಡೆದ ಶ್ರೀ ಶಾರದಾ ದೇವಿಯ ಶೋಭಾಯಾತ್ರೆಯಲ್ಲಿ ಕೇರಳದ ಸಾಂಪ್ರದಾಯಿಕ ಕಲಾಪ್ರಕಾರಗಳು ಮತ್ತು ಕರ್ನಾಟಕದ ವಾದ್ಯಮೇಳಗಳು ಗಮನ ಸೆಳೆದವು.ಬೊಳುವಾರು ವೃತ್ತದಿಂದ ಆರಂಭವಾದ ಶೋಭಾಯಾತ್ರೆಗೆ ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರು ಕೇಸರಿ ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು. ದಕ್ಷಿಣ ಕನ್ನಡದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಶೋಕ್ ಕುಮಾರ್ ರೈ ಮತ್ತು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುಷ್ಪಾರ್ಚನೆ ಸಲ್ಲಿಸಿದರು. ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ತೆಂಗಿನಕಾಯಿ ಒಡೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕೇರಳದ ತ್ರಿಶ್ಶೂರಿನ ಕರಿಂಕಾಳಿ, ಕಥಕ್ಕಳಿ ಮತ್ತು ಕಾಳಿ ನೃತ್ಯ ತಂಡಗಳು, ಅಲೆಪ್ಪಿಯ ಆಗೋರಿ ತಂಡ, ಪಾಲಕ್ಕಾಡ್‌ನ ಪೂತಂ ತೇರ, ಮಲಪ್ಪುರಂನ ವಿವಿಧ ಕಲಾತಂಡಗಳು, ಕಾಸರಗೋಡಿನ ಗೊರಿಲ್ಲ, ದೇವಿ ಬೋರ್ಡ್, ಮುತ್ತು ಕೊಡೆ ಮತ್ತು ತಾಂಬೂಲಂ ತಂಡಗಳು ಹಾಗೂ ಎರ್ನಾಕುಳಂನ ದೇವರೂಪಂ ನೃತ್ಯ ತಂಡಗಳು ಪ್ರದರ್ಶನ ನೀಡಿದವು. ಕಾಸರಗೋಡಿನ ತಾಂಬೂಲಂ ತಂಡ ಇದೇ ಮೊದಲ ಬಾರಿಗೆ ಪುತ್ತೂರಿನಲ್ಲಿ ಪ್ರದರ್ಶನ ನೀಡಿತು.
ಚೆಂಡೆ ವಾದನದ ಜತೆಗೆ ವಯಲಿನ್, ಕೊಳಲು, ರಿದಂ ಪ್ಯಾಡ್ ಮತ್ತು ಸ್ಯಾಕ್ಸೋಫೋನ್‌ನ ಸಂಗೀತ ಸಂಯೋಜನೆ ಮೆರವಣಿಗೆಗೆ ಮೆರುಗು ನೀಡಿತು. ನೂರಾರು ಕುಣಿತ ಭಜನಾ ತಂಡಗಳು ಭಾಗವಹಿಸಿ ಭಕ್ತಿ ಮತ್ತು ಸಾಂಸ್ಕೃತಿಕ ಸಂಭ್ರಮವನ್ನು ಹೆಚ್ಚಿಸಿದವು.ಮಾಜಿ ಶಾಸಕ ಸಂಜೀವ ಮಠಂದೂರು, ಉದ್ಯಮಿ ಮಿತ್ರಂಪಾಡಿ ಜಯರಾಮ ರೈ, ಮುರಳೀಕೃಷ್ಣ ಹಸಂತಡ್ಕ, ಡಾ. ಕೃಷ್ಣಪ್ರಸನ್ನ, ಬೂಡಿಯಾರು ರಾಧಾಕೃಷ್ಣ ರೈ, ಚನಿಲ ತಿಮ್ಮಪ್ಪ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ನವೀನ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.









