ಗೂನಡ್ಕ: ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಾಲಕನೋರ್ವ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಮಡಿಕೇರಿ ಕಡೆಯಿಂದ ಬರುತ್ತಿದ್ದ ಲಾರಿ ನಡುವೆ ಗೂನಡ್ಕ ಶಾಲೆಯ ತಿರುವಿನ ಬಳಿ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತದಲ್ಲಿ ಬಾಲಕ ಮೃತಪಟ್ಟಿದ್ದು, ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರಿನಲ್ಲಿದ್ದವರು ಮೂಲತಃ ಬಂಟ್ವಾಳ ತಾಲೂಕಿನ ಪುಣಚ ಮೂಲದವರು ಎಂದು ತಿಳಿದುಬಂದಿದೆ. ಅಪಘಾತದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.









