ಮಂಗಳೂರು: ಮಂಗಳೂರು ನಗರದಲ್ಲಿ ನಡೆದ ದ್ವಿಚಕ್ರ ವಾಹನ ಕಳವು ಪ್ರಕರಣಗಳನ್ನು ಭೇದಿಸಿರುವ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು, ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಮೂವರು ಬಾಲಕರು ಸೇರಿದಂತೆ ಒಟ್ಟು ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ಕಳವು ಮಾಡಲಾಗಿದ್ದ ಆರು ದ್ವಿಚಕ್ರ ವಾಹನಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮೂರು ವಾಹನಗಳು ಸೇರಿ ಒಟ್ಟು ಒಂಬತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ ₹4.50 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಸೇರಿದಂತೆ ಒಟ್ಟು ಆರು ದ್ವಿಚಕ್ರ ವಾಹನ ಕಳವು ಪ್ರಕರಣಗಳು ದಾಖಲಾಗಿದ್ದವು.ಅಕ್ಟೋಬರ್ 12ರಂದು ವೆಲೆನ್ಸಿಯಾ ಜಂಕ್ಷನ್‌ನ ಡಾನ್ ಬಾಸ್ಕೋ ಹಾಸ್ಟೆಲ್ ಬಳಿ ನಿಲ್ಲಿಸಿದ್ದ ಕೆಟಿಎಂ ಡ್ಯೂಕ್ ಬೈಕ್, ಅಕ್ಟೋಬರ್ 19ರಂದು ಜಪ್ಪು ಮಾರ್ಕೆಟ್ ಬಳಿ ನಿಲ್ಲಿಸಿದ್ದ ಯಮಹಾ ಎಫ್‌ಝಡ್ ಬೈಕ್, ಅಕ್ಟೋಬರ್ 21ರಂದು ಅತ್ತಾವರದ ಕೆಎಂಸಿ ಆಸ್ಪತ್ರೆ ಬಳಿಯ ದುರ್ಗಾ ಹೋಟೆಲ್ ಮುಂಭಾಗ ನಿಲ್ಲಿಸಿದ್ದ ಬಜಾಜ್ ಡಿಸ್ಕವರಿ ಬೈಕ್ ಹಾಗೂ ಅಕ್ಟೋಬರ್ 22ರಂದು ಹೊಯಿಗೆ ಬಜಾರ್‌ನ ಭಗವತಿ ಅಪಾರ್ಟ್‌ಮೆಂಟ್ ಕೆಳಗೆ ನಿಲ್ಲಿಸಿದ್ದ ಕೆಟಿಎಂ ಡ್ಯೂಕ್ ಬೈಕ್ ಕಳವಾಗಿದ್ದವು.ಅದೇ ರೀತಿ, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆಯ ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಬಳಿ ಅಕ್ಟೋಬರ್ 18ರಂದು ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬುಲೆಟ್ ಹಾಗೂ ಕುತ್ತಾರ್ ಪಂಡಿತ್ ಹೌಸ್ ಬಳಿ ಅಕ್ಟೋಬರ್ 21ರಂದು ನಿಲ್ಲಿಸಿದ್ದ ಯಮಹಾ ಎಫ್‌ಝಡ್ ಬೈಕ್ ಕಳವಾಗಿದ್ದವು.ಪ್ರಕರಣಗಳ ತನಿಖೆಗಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಉಪನಿರೀಕ್ಷಕರು ಹಾಗೂ ಅಪರಾಧ ಪತ್ತೆ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಮಾಹಿತಿ ಸಂಗ್ರಹಿಸಿ ತನಿಖೆ ನಡೆಸಿ ಏಳು ಮಂದಿಯನ್ನು ವಶಕ್ಕೆ ಪಡೆದುಕೊಂಡಿದೆ. ಈ ಪೈಕಿ ನಾಲ್ವರನ್ನು ಬಂಧಿಸಲಾಗಿದ್ದು, ಉಳಿದ ಮೂವರು ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕರಾಗಿದ್ದಾರೆ.ಐಷಾರಾಮಿ ಜೀವನಕ್ಕಾಗಿ ಕಳವುವಿಚಾರಣೆ ವೇಳೆ, ಆರೋಪಿಗಳು ಸರಗಳ್ಳತನ ಸೇರಿದಂತೆ ಇತರ ಅಪರಾಧ ಕೃತ್ಯಗಳ ಮೂಲಕ ಹಣ ಸಂಪಾದಿಸಿ ಐಷಾರಾಮಿ ಜೀವನ ನಡೆಸುವ ಉದ್ದೇಶ ಹೊಂದಿದ್ದರು ಎಂಬುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಲೆಬಾಳುವ ಬೈಕ್‌ಗಳನ್ನು ಗುರಿಯಾಗಿಸಿಕೊಂಡು, ನಿಲುಗಡೆ ಮಾಡಿದ್ದ ಸ್ಥಳಗಳಿಂದ ಕಳವು ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.ಬಂಧಿತ ನಾಲ್ವರು ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.ಪೊಲೀಸ್ ತಂಡಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಘವೇಂದ್ರ ಬೈಂದೂರು ಅವರ ನೇತೃತ್ವದಲ್ಲಿ ಪಿಎಸ್‌ಐ ಮಾರುತಿ ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಪುಟ್ಟರಾಮ್, ಸಾಗರ ದೇವಕತ್ತಿ ಮತ್ತು ಆಂಜನೇಯ ಕೆ.ಎಸ್. ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಠಾಣೆಯ ಇತರ ಅಧಿಕಾರಿ ಮತ್ತು ಸಿಬ್ಬಂದಿ ಸಹಕರಿಸಿದ್ದರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!