ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಹಾಗೂ ಶಾಲಾ ನಾಯಕಿ ಆರಾಧ್ಯ ಎಸ್. ಅವರು ರಾಷ್ಟ್ರಮಟ್ಟದ ಅಬ್ದುಲ್ ಕಲಾಂ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪುತ್ತೂರಿನ ವಿವೇಕ್ ಆಳ್ವ ಮತ್ತು ಸ್ಮಿತಾ ವಿವೇಕ್ ದಂಪತಿಯ ಪುತ್ರಿಯಾಗಿರುವ ಆರಾಧ್ಯ, ಅಪರೂಪದ ಕಾಡು ಹೂಗಳು ಹಾಗೂ ವಿವಿಧ ಜೀವಿಗಳ ಕುರಿತು ಸೃಜನಾತ್ಮಕ ವಿಡಿಯೊಗಳನ್ನು ರಚಿಸಿ, ‘Listen Forest – I am Aaradhya’ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಪ್ರಕೃತಿಯ ಸೌಂದರ್ಯ ಮತ್ತು ವೈವಿಧ್ಯತೆಯನ್ನು ಪರಿಚಯಿಸುತ್ತಿದ್ದಾರೆ.
ಅಲ್ಲದೆ, ಅತಿ ಕಿರಿಯ ವಯಸ್ಸಿನಲ್ಲಿಯೇ ‘Tiny Wild Flowers’ ಎಂಬ ಸಂಶೋಧನಾ ಪುಸ್ತಕವನ್ನು ರಚಿಸಿರುವುದು ಅವರ ಸಾಧನೆಗೆ ಮತ್ತೊಂದು ಹೆಗ್ಗಳಿಕೆಯಾಗಿದೆ. ಪ್ರಕೃತಿ ಮತ್ತು ಜೀವವೈವಿಧ್ಯದ ಕುರಿತಾದ ಆಸಕ್ತಿ ಹಾಗೂ ಸೃಜನಶೀಲ ಪ್ರಯತ್ನಗಳನ್ನು ಗುರುತಿಸಿ ಅವರಿಗೆ ಈ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿದೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ರೋಸಲಿನ್ ಲೋಬೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








