ನೇರಳಕಟ್ಟೆ: ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ ಹೊಡೆದು, ಲಾರಿ ಹರಿದ ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಾಣಿ ಸಮೀಪದ ನೇರಳಕಟ್ಟೆಯಲ್ಲಿ ನ. 19ರಂದು ಸಂಜೆ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ನೇರಳಕಟ್ಟೆ ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಇಲ್ಯಾಸ್ ಅವರ ಪುತ್ರಿ ಫಾತಿಮಾ ಇಝಾಹಾ ಇಲ್ಯಾಸ್ ಎಂದು ಗುರುತಿಸಲಾಗಿದೆ. ಈಕೆ ಕಂಬಳಬೆಟ್ಟುವಿನ ಜನಪ್ರಿಯ ಸೆಂಟ್ರಲ್ ಸ್ಕೂಲ್‌ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಶಾಲೆ ಮುಗಿಸಿ ಕಂಬಳಬೆಟ್ಟುವಿನಿಂದ ಕಬಕಕ್ಕೆ ಬಂದಿದ್ದ ವಿದ್ಯಾರ್ಥಿನಿ, ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಂಬಳಬೆಟ್ಟುವಿಗೆ ಪ್ರಯಾಣಿಸಿದ್ದಳು. ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ವೇಳೆ ಗುಜರಾತ್ ನೋಂದಣಿಯ (GJ 27 T 3022) ಲಾರಿ ಡಿಕ್ಕಿ ಹೊಡೆದು, ಆಕೆಯ ಮೇಲೆ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಮೃತ ವಿದ್ಯಾರ್ಥಿನಿಯ ಕುಟುಂಬ ಮೂಲತಃ ಅತೂರಿನವರಾಗಿದ್ದು, ನೇರಳಕಟ್ಟೆ ಕಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ವಾಸವಾಗಿದ್ದರು. ಮೃತರು ತಂದೆ, ತಾಯಿ ಹಾಗೂ ತಮ್ಮನನ್ನು ಅಗಲಿದ್ದಾರೆ.

ವಿಟ್ಲ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!