ಪುತ್ತೂರು: ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸವಣೂರಿನ ಸ್ವಂತ ನಿವೇಶನದಲ್ಲಿ ನಿರ್ಮಿಸಲಾದ ಕೇಂದ್ರ ಕಚೇರಿ, ಸವಣೂರು ಶಾಖೆ ಹಾಗೂ ವಾಣಿಜ್ಯ ಸಂಕೀರ್ಣಗಳ ಉದ್ಘಾಟನೆ ಮತ್ತು ಸಂಘದ ರಜತ ಮಹೋತ್ಸವ ಸಮಾರಂಭ ಸೋಮವಾರ ಅದ್ದೂರಿಯಾಗಿ ನಡೆಯಿತು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಆದರ್ಶ ಸಹಕಾರಿಯು ಗ್ರಾಹಕರ ವಿಶ್ವಾಸ ಗಳಿಸಿದ ಸಂಸ್ಥೆಯಾಗಿ ಇತರ ಸಹಕಾರ ಸಂಘಗಳಿಗೆ ಆದರ್ಶವಾಗಿದೆ. ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ಅವರು ಸೇವೆ, ಶ್ರದ್ಧೆ ಮತ್ತು ಛಲದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಸವಣೂರಿನ ರತ್ನವಾಗಿ ಮಿನುಗುತ್ತಿದ್ದಾರೆ ಎಂದರು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸಹಕಾರ ತತ್ವವು ಜೀವನದ ಸಾರವಾಗಿದ್ದು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುವ ಶಕ್ತಿಯನ್ನು ಹೊಂದಿದೆ. ಆದರ್ಶ ಸಹಕಾರಿಯ ರಜತ ಸಂಭ್ರಮವು ಸುವರ್ಣ ಸಂಭ್ರಮಕ್ಕೆ ಮುನ್ನುಡಿಯಾಗಿದೆ. ಅಧ್ಯಕ್ಷ ಸೀತಾರಾಮ ರೈ ಅವರು ಕ್ರಿಯಾಶೀಲವಾಗಿ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ವಿಶೇಷ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಸುಮಾರು 35 ವರ್ಷಗಳ ಹಿಂದೆ ಸಹಕಾರ ಸಂಘಗಳು ಪಡಿತರ ಮತ್ತು ಗೊಬ್ಬರ ವಿತರಣೆಗೆ ಸೀಮಿತವಾಗಿದ್ದವು. ಆದರೆ ಇಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಸಂಘಗಳು ಬಲಿಷ್ಠ ಆರ್ಥಿಕ ಶಕ್ತಿಯಾಗಿ ಬೆಳೆದಿದ್ದು, ವಾಣಿಜ್ಯ ಬ್ಯಾಂಕ್ಗಳಿಗೆ ಪೈಪೋಟಿ ನೀಡುವ ಸೇವೆ ಒದಗಿಸುತ್ತಿವೆ. ಗ್ರಾಮೀಣ ಭಾಗದ ಜನರ ಬಳಿಗೆ ತೆರಳಿ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಸ್ವಾವಲಂಬಿ ಬದುಕಿಗೆ ನೆರವಾಗಿವೆ ಎಂದರು.
ಸೀತಾರಾಮ ರೈ ಅವರೊಂದಿಗೆ ಡಿಸಿಸಿ ಬ್ಯಾಂಕಿನಲ್ಲಿ ಕೆಲಸ ಮಾಡಿದ ಅನುಭವವನ್ನು ಸ್ಮರಿಸಿದ ಅವರು, ಸಣ್ಣ ಊರಾಗಿದ್ದ ಸವಣೂರನ್ನು ನಗರದ ರೀತಿಯಲ್ಲಿ ಅಭಿವೃದ್ಧಿಪಡಿಸಿದ ಹೆಗ್ಗಳಿಕೆ ಸೀತಾರಾಮ ರೈ ಅವರಿಗೆ ಸಲ್ಲುತ್ತದೆ. ಆದರ್ಶ ಸಹಕಾರಿಯನ್ನು ಮಾದರಿ ಸಂಸ್ಥೆಯಾಗಿ ಬೆಳೆಸಿದ್ದಾರೆ ಎಂದು ಶ್ಲಾಘಿಸಿ, ಸಂಘಕ್ಕೆ ₹10 ಲಕ್ಷ ನೆರವು ಘೋಷಿಸಿದರು.
ಸಮಾರಂಭವನ್ನು ಉದ್ಘಾಟಿಸಿದ ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ನ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಮಾತನಾಡಿ, ಸೀತಾರಾಮ ರೈ ಅವರು ಉದ್ಯಮ ಹಾಗೂ ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಆದರ್ಶ ಸಹಕಾರ ಸಂಘವು ಶೀಘ್ರದಲ್ಲೇ 25 ಶಾಖೆಗಳನ್ನು ಹೊಂದಿ ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು.
ಸಂಘದ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಮಾತನಾಡಿ, ಸಹಕಾರಿ ಕ್ಷೇತ್ರದ ಮೂಲಕವೇ ತಮ್ಮ ದುಡಿಮೆಯನ್ನು ಆರಂಭಿಸಿದ್ದು, 58 ವರ್ಷಗಳ ಅನುಭವದೊಂದಿಗೆ ಆದರ್ಶ ಸಹಕಾರಿಯನ್ನು ಮುನ್ನಡೆಸಿಕೊಂಡು ಬರುತ್ತಿದ್ದೇನೆ. ಸಂಘಕ್ಕಾಗಿ ಸವಣೂರಿನಲ್ಲಿ 75 ಸೆಂಟ್ಸ್ ನಿವೇಶನ ಖರೀದಿಸಿ, ಸ್ಥಳೀಯ ಅಗತ್ಯಗಳಿಗೆ ಪೂರಕವಾಗಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ರಜತ ಮಹೋತ್ಸವದ ಅಂಗವಾಗಿ ಸುಮಾರು ₹2 ಲಕ್ಷ ವೆಚ್ಚದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗಿದ್ದು, ₹1 ಲಕ್ಷ ವೆಚ್ಚದಲ್ಲಿ ವಿದ್ಯಾರಶ್ಮಿ ವಿದ್ಯಾಸಂಸ್ಥೆಗೆ ಕಂಪ್ಯೂಟರ್ ಕೊಡುಗೆ ನೀಡಲಾಗಿದೆ. ಸಂಸ್ಥೆಯೊಂದಿಗೆ ದುಡಿದವರನ್ನು ಗೌರವಿಸುವ ಮೂಲಕ ರಜತ ಸಂಭ್ರಮವನ್ನು ಸ್ಮರಣೀಯಗೊಳಿಸಲಾಗಿದೆ ಎಂದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಸಂಘದ ಕೇಂದ್ರ ಕಚೇರಿಯನ್ನು ಹಾಗೂ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಸವಣೂರು ಶಾಖೆಯನ್ನು ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸಹಕಾರಿ ಧ್ವಜಾರೋಹಣ ನೆರವೇರಿಸಿದರು. ಸ್ವಾಮೀಜಿಗಳು ರಜತ ಮಹೋತ್ಸವದ ಸ್ಮರಣಾರ್ಥ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿದರು.
ಹಿರಿಯ ಸಹಕಾರಿ ಜಾಕೆ ಮಾಧವ ಗೌಡ ಅವರಿಗೆ ಆದರ್ಶ ರಜತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆಡಳಿತ ಮಂಡಳಿಯ ಆರಂಭದಿಂದಲೂ ಸೇವೆ ಸಲ್ಲಿಸುತ್ತಿರುವ ಅಧ್ಯಕ್ಷ ಕೆ. ಸೀತಾರಾಮ ರೈ, ಉಪಾಧ್ಯಕ್ಷ ಎನ್. ಸುಂದರ ರೈ ಸವಣೂರು, ನಿರ್ದೇಶಕರಾದ ಎಸ್.ಎಂ. ಬಾಪು ಸಾಹೇಬ್ ಸುಳ್ಯ, ಬಿ. ಮಹಾಬಲ ರೈ ಬೋಳಂತೂರು, ಪೂರ್ಣಿಮಾ ಎಸ್. ಆಳ್ವ ಮಂಗಳೂರು, ಆರಂಭದಿಂದಲೂ ಸೇವೆ ಸಲ್ಲಿಸುತ್ತಿರುವ ಮಹಾಪ್ರಬಂಧಕ ವಸಂತ್ ಜಾಲಾಡಿ, ನಿವೃತ್ತ ಸಿಬ್ಬಂದಿ, ಪಿಗ್ಮಿ ಸಂಗ್ರಾಹಕರು, ಕಟ್ಟಡ ಗುತ್ತಿಗೆದಾರರು ಹಾಗೂ ಎಂಜಿನಿಯರ್ಗಳನ್ನು ಸನ್ಮಾನಿಸಲಾಯಿತು.
ಸಹಕಾರ ಸಂಘಗಳ ದಕ್ಷಿಣ ಕನ್ನಡ ಜಿಲ್ಲಾ ಉಪನಿಬಂಧಕ ರಮೇಶ್ ಎಚ್.ಎನ್. ಹಾಗೂ ಸವಣೂರು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಹರೀಶ್ ಕೆ. ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘದ ನಿರ್ದೇಶಕರಾದ ಎನ್. ಜಯಪ್ರಕಾಶ್ ರೈ ಸುಳ್ಯ, ವಿ.ವಿ. ನಾರಾಯಣ ಭಟ್, ಎನ್. ರಾಮಯ್ಯ ರೈ ತಿಂಗಳಾಡಿ, ಅಶ್ವಿನ್ ಎಲ್. ಶೆಟ್ಟಿ ಸವಣೂರು, ಸೀತಾರಾಮ ಶೆಟ್ಟಿ ಬಿ., ಮಹಾದೇವ ಎಂ., ಯಮುನಾ ಎಸ್. ರೈ, ಚಿಕ್ಕಪ್ಪ ನಾಯ್ಕ್ ಅರಿಯಡ್ಕ, ರಶ್ಮಿ ಎಸ್. ರೈ, ಎಜಿಎಂ ಸುನಾದ್ ರಾಜ್ ಶೆಟ್ಟಿ ಹಾಗೂ ನಿರ್ದೇಶಕ ಜೈರಾಜ್ ಭಂಡಾರಿ ನೋಣಾಲು ಉಪಸ್ಥಿತರಿದ್ದರು.









