ಕೇರಳ: ಮಂಗಳೂರಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲೆಸೆದು ಕಿಟಕಿ ಗಾಜುಗಳನ್ನು ಹಾನಿಗೊಳಿಸಿರುವ ಘಟನೆ ಆಲುವಾದಲ್ಲಿ ನಡೆದಿದೆ.
ಸುಜಿತ್ ಸುರೇಶ್ (19) ಬಂಧಿತ ಆರೋಪಿ. ತಿರುವನಂತಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಈತ ಮೂರು ಬಾರಿ ಕಲ್ಲು ಎಸೆದಿದ್ದಾನೆ. ಪರಿಣಾಮ ರೈಲಿನ ಕಿಟಕಿಯ ಗಾಜುಗಳಿಗೆ ಹಾನಿಯಾಗಿದೆ.
ಆರೋಪಿಯ ಪ್ರೇಯಸಿಯ ಮನೆಯು ರೈಲ್ವೆ ಹಳಿಗಳ ಸಮೀಪದಲ್ಲಿದ್ದು, ಆಕೆ ತನ್ನನ್ನು ಬಿಟ್ಟು ಹೋಗಿದ್ದಾಳೆ ಎಂಬ ಕೋಪ ಹಾಗೂ ಪ್ರೇಮ ವೈಫಲ್ಯದ ಬೇಸರದಿಂದ ಈ ಕೃತ್ಯ ಎಸಗಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ.
ರೈಲ್ವೆ ಹಳಿಗಳ ಸಮೀಪ ಪದೇಪದೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಗುರುತಿಸಿದ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಆರೋಪಿಯ ವಿರುದ್ಧ ಭಾರತೀಯ ರೈಲ್ವೆ ಕಾಯ್ದೆಯ ಸೆಕ್ಷನ್ 153ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.









