ಪುತ್ತೂರು: ಕಳೆದ 14 ವರ್ಷಗಳಿಂದ ದೀಪಾವಳಿ ಸಂದರ್ಭದಲ್ಲಿ ತನ್ನ ಸ್ವಂತ ಉದ್ಯಮದ ಸಂಪಾದನೆಯ ಒಂದಷ್ಟು ಮೊತ್ತವನ್ನು ಬಡವರಿಗೆ ಹಂಚುವ ಕೆಲಸ ಮಾಡುತ್ತಿದ್ದೇನೆ. ನಾನು ಯಾವುದೇ ಅಹಂಕಾರದಿಂದ ಈ ಕಾರ್ಯಕ್ರಮ ಆಯೋಜಿಸುತ್ತಿಲ್ಲ. ದೇವರು ಎಷ್ಟು ವರ್ಷ ಈ ಸೇವೆ ಮಾಡಲು ಶಕ್ತಿ ನೀಡುತ್ತಾನೋ ಅಷ್ಟು ವರ್ಷ ಮುಂದುವರಿಸುತ್ತೇನೆ. ಅಶೋಕ ಜನಮನ ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವದಿಸುವುದೇ ನನಗೆ ನೀವು ನೀಡುವ ದೊಡ್ಡ ಶಕ್ತಿ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನ. 22ರಂದು ನಡೆಯಲಿರುವ ಅಶೋಕ ಜನಮನ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯಲ್ಲಿ ಹಾಗೂ ವಿವಿಧ ಸಮಿತಿಗಳ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಕಾರ್ಯಕ್ರಮವು ನ. 22ರಂದು ಬೆಳಿಗ್ಗೆ 9.30ರಿಂದ ಆರಂಭವಾಗಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರೂ ನಮ್ಮ ಅತಿಥಿಗಳು. ಬೆಳಿಗ್ಗೆ ಬರುವವರಿಗೆ ಉಪಾಹಾರ, ಮಧ್ಯಾಹ್ನ ಬರುವವರಿಗೆ ಊಟ ಹಾಗೂ ಸಂಜೆ ಆಗಮಿಸುವವರಿಗೆ ಸಂಜೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಉಡುಗೊರೆ ನೀಡಲಾಗುವುದು. ಯಾರನ್ನೂ ಕಾಯಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಅಶೋಕ ಜನಮನ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಿದೆ. ಎಲ್ಲರಿಗೂ ಊಟ, ಉಪಾಹಾರದ ಜೊತೆಗೆ ಉಡುಗೊರೆ ವಿತರಿಸಲಾಗುವುದು. ತಟ್ಟೆ, ಟವೆಲ್, ಬೆಡ್ಶೀಟ್ ಹಾಗೂ ಸೀರೆ ಈ ನಾಲ್ಕು ವಸ್ತುಗಳ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಉತ್ತಮ ಗುಣಮಟ್ಟದ ಉಡುಗೊರೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.
ಈಗಾಗಲೇ ಟ್ರಸ್ಟ್ ಸದಸ್ಯರು ಗ್ರಾಮ ಮಟ್ಟಕ್ಕೆ ತೆರಳಿ ಸಾರ್ವಜನಿಕರನ್ನು ಆಹ್ವಾನಿಸುತ್ತಿದ್ದಾರೆ. ಆಮಂತ್ರಣ ಪತ್ರಿಕೆ ಸಿಗದವರು ಕೂಡ ಇದನ್ನೇ ಆಮಂತ್ರಣವೆಂದು ಪರಿಗಣಿಸಿ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.
ಅಪಪ್ರಚಾರಗಳಿಗೆ ಕಿವಿಗೊಡಬೇಡಿ
ಬಡವರಿಗೆ ನೆರವು ನೀಡುವ ಕೆಲಸವನ್ನು ಸಹಿಸಲಾಗದೆ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ ವರ್ಷ ಹೀಗಾಯಿತು, ಹಾಗಾಯಿತು ಎಂದು ಜನರಲ್ಲಿ ಭಯ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಅಪಪ್ರಚಾರ ಮಾಡುವವರಿಗೂ ಬಡವರಿಗೆ ಸಹಾಯ ಮಾಡುವ ಶಕ್ತಿಯನ್ನು ದೇವರು ನೀಡಲಿ ಹಾಗೂ ಅವರಿಗೆ ಸದ್ಬುದ್ಧಿ ಕರುಣಿಸಲಿ ಎಂದು ಅಶೋಕ್ ರೈ ಹೇಳಿದರು.
ಸಿದ್ಧತೆಗಳು ಅಂತಿಮ ಹಂತದಲ್ಲಿ: ಸುದೇಶ್ ಶೆಟ್ಟಿ
ಕಾರ್ಯಕ್ರಮದ ಚಪ್ಪರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಊಟದ ವ್ಯವಸ್ಥೆ, ಉಡುಗೊರೆ ವಿತರಣೆ, ಹಿರಿಯ ನಾಗರಿಕರು ಹಾಗೂ ಅಶಕ್ತರಿಗೆ ವಿಶೇಷ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ತಿಳಿಸಿದರು.
ಗ್ರಾಮಗಳಿಗೆ ತೆರಳಿ ಆಮಂತ್ರಣ ನೀಡುವ ಕಾರ್ಯ, ಪ್ರಚಾರ ಹಾಗೂ ಪ್ರಸಾರ ಚಟುವಟಿಕೆಗಳು ನಡೆಯುತ್ತಿವೆ. ಒಂದು ಲಕ್ಷಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆಯಿದ್ದು, ಎಷ್ಟೇ ಜನರು ಬಂದರೂ ವ್ಯವಸ್ಥಿತವಾಗಿ ಕಾರ್ಯಕ್ರಮ ನಿರ್ವಹಿಸಲು ಸಿದ್ಧತೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ಟ್ರಸ್ಟ್ ಪ್ರಮುಖರಾದ ಸುಮಾ ಅಶೋಕ್ ರೈ, ಮಹಮ್ಮದ್ ಬಡಗನ್ನೂರು, ಡಾ. ರಾಜಾರಾಂ ಕೆ.ಬಿ., ಮುರಳೀಧರ್ ರೈ ಮಟಂತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ, ಯು.ಟಿ. ತೌಸೀಫ್ ಉಪ್ಪಿನಂಗಡಿ, ಕೃಷ್ಣಪ್ರಸಾದ್ ಆಳ್ವ, ಜಯಪ್ರಕಾಶ್ ಬದಿನಾರ್, ಕೃಷ್ಣಪ್ರಸಾದ್ ಭಟ್ ಬೊಳ್ಳಾವು, ರಿತೇಶ್ ಶೆಟ್ಟಿ ಪುತ್ತೂರು, ನಿಹಾಲ್ ಪಿ. ಶೆಟ್ಟಿ ಸಾಮೆತ್ತಡ್ಕ, ಯೋಗೀಶ್ ಸಾಮಾನಿ, ರಾಧಾಕೃಷ್ಣ ನಾಯ್ಕ್, ರಾಮಣ್ಣ ಪಿಲಿಂಜ ಉಪ್ಪಿನಂಗಡಿ ಸೇರಿದಂತೆ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.








