ಪುತ್ತೂರು: ಆಹಾರ ತ್ಯಾಜ್ಯದಿಂದ ಉತ್ಪಾದಿಸಲಾಗುವ ಅಧಿಕ ಎನ್‌ಪಿಕೆ (NPK) ಅಂಶಗಳನ್ನು ಹೊಂದಿರುವ ಸಾವಯವ ಸ್ಲರಿ ಗೊಬ್ಬರವನ್ನು ಕೃಷಿಕರ ತೋಟಗಳಿಗೆ ಪೂರೈಸುವ ನೂತನ ಯೋಜನೆಗೆ ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಹಾಗೂ ಕೃಷಿಕರ ಒಡನಾಡಿ ಸಂಸ್ಥೆ ಪಿಂಗಾರ ಕೈಜೋಡಿಸಿವೆ.
ಈ ಸಂಬಂಧ ಎರಡೂ ಸಂಸ್ಥೆಗಳ ನಡುವೆ ಒಡಂಬಡಿಕೆ ನಡೆದಿದ್ದು, ಕಾರ್ಯಕ್ರಮದಲ್ಲಿ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ಸ್ಲರಿ ಸಾಗಾಟದ ಟ್ಯಾಂಕನ್ನು ಪಿಂಗಾರ ಸಂಸ್ಥೆಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷ್ಣ ನಾರಾಯಣ ಮುಳಿಯ, ಪುತ್ತೂರಿನಲ್ಲಿ ಆಹಾರ ತ್ಯಾಜ್ಯದಿಂದ ಪ್ರತಿದಿನ ಸುಮಾರು 15 ಸಾವಿರ ಲೀಟರ್‌ಗೂ ಅಧಿಕ ಸಾವಯವ ಸ್ಲರಿ ಗೊಬ್ಬರ ಉತ್ಪಾದನೆಯಾಗುತ್ತಿದೆ. ಇದನ್ನು ಪಿಂಗಾರ ಸಂಸ್ಥೆಯ ನೇತೃತ್ವದಲ್ಲಿ ಕೃಷಿಕರ ತೋಟಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಪಿಂಗಾರ ಸಂಸ್ಥೆಯ ಅಧ್ಯಕ್ಷ ರಾಜಾರಾಮ್ ಸಿ.ಜಿ. ಬಲಿಪಗುಳಿ ಮಾತನಾಡಿ, ಈ ಸ್ಲರಿಯಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿದ್ದು, ಕಡಿಮೆ ದರದಲ್ಲಿ ಕೃಷಿಕರಿಗೆ ಲಭ್ಯವಾಗಲಿದೆ. ಇದರಿಂದ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಗೊಬ್ಬರವನ್ನು ನೇರವಾಗಿ ತೋಟದ ಗಿಡಗಳ ಬುಡಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಈ ಒಡಂಬಡಿಕೆ ಕೃಷಿಕರ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಪುತ್ತೂರು ನಗರಸಭೆ ಆಯುಕ್ತೆ ವಿದ್ಯಾ ಕಾಳೆ ಮಾತನಾಡಿ, ಈ ವಿಶೇಷ ಸಹಭಾಗಿತ್ವವು ಕೃಷಿ ಸಮೂಹಕ್ಕೆ ಅನುಕೂಲವಾಗಲಿ ಎಂದು ಶುಭ ಹಾರೈಸಿದರು.
ಕಳೆದ ಒಂದು ವರ್ಷದಿಂದ ಈ ಸ್ಲರಿ ಗೊಬ್ಬರವನ್ನು ಕೆಲವು ಅಡಿಕೆ ಹಾಗೂ ತೆಂಗಿನ ತೋಟಗಳಲ್ಲಿ ಬಳಸಲಾಗಿದ್ದು, ಉತ್ತಮ ಫಲಿತಾಂಶ ದೊರೆತಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಸಾವಯವ ಸ್ಲರಿ ಗೊಬ್ಬರ ಪಡೆಯಲು ಆಸಕ್ತ ಕೃಷಿಕರು ಪಿಂಗಾರ ಸಂಸ್ಥೆಯನ್ನು 9845955799 ಸಂಖ್ಯೆಗೆ ಸಂಪರ್ಕಿಸಬಹುದು.
ಈ ಸಂದರ್ಭದಲ್ಲಿ ಪಿಂಗಾರ ಸಂಸ್ಥೆಯ ಸಿಇಒ ಪ್ರದೀಪ್ ಎಸ್., ನಿರ್ದೇಶಕರಾದ ರಾಮಕಿಶೋರ್ ಕೆ., ಶ್ಯಾಮಸುಂದರ್ ಎನ್., ಪ್ರಕಾಶ್ ವಿ., ಜಯಪ್ರಕಾಶ್ ನಾಯಕ್, ಸಾಯಿಗೀತಾ ಸಿ.ಎಚ್., ಗಣೇಶ್ ಕೆ.ಎಂ., ಪುತ್ತೂರು ನಗರಸಭೆಯ ಪರಿಸರ ವಿಭಾಗದ ಅಧಿಕಾರಿ ಶಬರಿನಾಥ್ ರೈ ಹಾಗೂ ಸಲಹೆಗಾರ ವೇಣು ಶರ್ಮ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

Join WhatsApp Group
error: Content is protected !!