ಸೌಜನ್ಯ ಪ್ರಕರಣದ ಹೆಸರಿನಲ್ಲಿ ಧರ್ಮಸ್ಥಳಕ್ಕೆ ಕಳಂಕ: ಗ್ರಾಮಸ್ಥರ ಆರೋಪ
1,510 ಅಸಹಜ ಸಾವುಗಳೆಂಬುದು ಸುಳ್ಳು, ಆರ್‌ಟಿಐ ದಾಖಲೆ ಪ್ರಕಾರ 374 ಪ್ರಕರಣಗಳಷ್ಟೇ ದಾಖಲು: ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ್ ರಾವ್ ಸ್ಪಷ್ಟನೆ
ಬೆಳ್ತಂಗಡಿ, ನ.15: ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಧರ್ಮಸ್ಥಳ ಕ್ಷೇತ್ರ ಹಾಗೂ ಗ್ರಾಮದ ಹೆಸರಿಗೆ ಕಳಂಕ ತರುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಸೌಜನ್ಯಳಿಗೆ ನ್ಯಾಯ ದೊರೆಯಬೇಕೆಂಬ ಹೋರಾಟವನ್ನು ಕೆಲವರು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಧರ್ಮಸ್ಥಳ ಗ್ರಾಮಸ್ಥರ ಪರವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಲಾಯಿತು.
ಧರ್ಮಸ್ಥಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಶ್ರೀನಿವಾಸ್ ರಾವ್, 2000ರಿಂದ 2014ರವರೆಗೆ ಧರ್ಮಸ್ಥಳದಲ್ಲಿ 1,510 ಅಸಹಜ ಸಾವುಗಳು ಸಂಭವಿಸಿವೆ ಎಂಬ ಮಾಹಿತಿ ತಪ್ಪು. ಪೊಲೀಸ್ ಇಲಾಖೆಯು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿರುವ ಅಧಿಕೃತ ದಾಖಲೆಗಳ ಪ್ರಕಾರ, ಧರ್ಮಸ್ಥಳ ಗ್ರಾಮದಲ್ಲಿ 374 ಅಸಹಜ ಸಾವುಗಳು ಮಾತ್ರ ದಾಖಲಾಗಿವೆ ಎಂದು ತಿಳಿಸಿದರು.

ಸೌಜನ್ಯ ಪ್ರಕರಣದಲ್ಲಿ ನ್ಯಾಯ ದೊರೆಯಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಈ ವಿಚಾರದಲ್ಲಿ ಧರ್ಮಸ್ಥಳದ ಗ್ರಾಮಸ್ಥರೇ ಮೊದಲು ಧ್ವನಿ ಎತ್ತಿದ್ದರು. ಆದರೆ ಬಳಿಕ ಕುಸುಮಾವತಿ ಅವರನ್ನು ಮುಂದಿಟ್ಟುಕೊಂಡು ಕ್ಷೇತ್ರಕ್ಕೆ ಕಳಂಕ ತರುವ ಪ್ರಯತ್ನ ನಡೆಯುತ್ತಿದೆ. ಪ್ರಕರಣದ ಮೂಲ ವಿಚಾರವನ್ನು ಬೇರೆ ಆಯಾಮಕ್ಕೆ ಕೊಂಡೊಯ್ಯಲಾಗುತ್ತಿದೆ. ಈ ಹಿಂದೆ ತನಿಖೆಗೊಳಗಾಗಿ ನಿರ್ದೋಷಿಗಳಾಗಿ ಮುಕ್ತರಾಗಿದ್ದವರನ್ನು ಮತ್ತೆ ಆರೋಪಿಗಳಂತೆ ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಲೆಬುರುಡೆ ಪತ್ತೆ ಹಿಂದೆ ವಿರೋಧಿಗಳ ಕೈವಾಡದ ಶಂಕೆ
ಧರ್ಮಸ್ಥಳ ಸ್ನಾನಘಟ್ಟದ ಬಳಿ ಮಾನವ ತಲೆಬುರುಡೆ ಪತ್ತೆಯಾದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ವಿರೋಧಿಗಳೇ ತಲೆಬುರುಡೆಯನ್ನು ತಂದು ಹಾಕಿರಬಹುದು ಎಂಬ ಅನುಮಾನವಿದೆ. ಆದರೆ ಪ್ರಕರಣದ ಸತ್ಯಾಸತ್ಯತೆಯನ್ನು ಪೊಲೀಸ್ ಇಲಾಖೆಯೇ ತನಿಖೆಯ ಮೂಲಕ ಬಹಿರಂಗಪಡಿಸಬೇಕು ಎಂದರು.
ನಿರಂತರವಾಗಿ ಸುಳ್ಳು ಊಹಾಪೋಹಗಳನ್ನು ಹರಡುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಸರ್ಕಾರ ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಗೆ ಬೆಂಬಲ ಸೂಚಿಸಿ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

Join WhatsApp Group
error: Content is protected !!