ಬೆಳ್ತಂಗಡಿ, ನ.15: ‘ಕಾಂಗ್ರೆಸ್‌ನಂತಹ ದರಿದ್ರ ಪಕ್ಷದ ಹಿಂದೆ ನೀವು ಯಾವತ್ತೂ ಹೋಗಬೇಡಿ ಮಕ್ಕಳೇ’ ಎಂದು ಹೇಳುವ ಮೂಲಕ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶಾಲೆಯ ಸಭಾಭವನ ಉದ್ಘಾಟನೆ ಸಮಾರಂಭದ ವೇದಿಕೆಯನ್ನು ರಾಜಕೀಯ ಭಾಷಣಕ್ಕೆ ಬಳಸಿಕೊಂಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಶಾಲೆಯ ನೂತನ ಸಭಾಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ನಾಮಕರಣ ಮಾಡಲಾಗಿತ್ತು. ಆದರೆ, ಇದಕ್ಕೆ ಸರ್ಕಾರದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತು. ಇಲಾಖೆಯ ಸೂಚನೆಯಂತೆ ಉದ್ಘಾಟನಾ ಕಾರ್ಯಕ್ರಮ ರದ್ದುಗೊಂಡಿದ್ದು, ಕೇವಲ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಮಾತನಾಡಿದ ಹರೀಶ್ ಪೂಂಜ, ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ನಂತಹ ದರಿದ್ರ, ಕೆಟ್ಟ ಪಕ್ಷವನ್ನು ನೀವು ಯಾವತ್ತೂ ನೆಚ್ಚಿಕೊಂಡು ಹೋಗಬೇಡಿ. ಈ ದೇಶ ಇರುವುದು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ. ನಿಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಯಾರು ತೊಂದರೆ ಕೊಡುತ್ತಿದ್ದಾರೆ ಅವರ ಹಿಂದೆ ಹೋಗಬೇಡಿ. ಎಲ್ಲಿಂದಲಾದರೂ ಕಾಡಿ, ಬೇಡಿಯಾದರೂ ಅನುದಾನ ತಂದು ಶಾಲೆಯನ್ನು ಅಭಿವೃದ್ಧಿಪಡಿಸುತ್ತೇನೆ’ ಎಂದು ಹೇಳಿದರು.
‘ನಾನು ಬಸವನಗುಡಿಯ ದೇವರಿಗೆ ಕೈಮುಗಿದು, ಇಂತಹ ದುಷ್ಟ ಬುದ್ಧಿಗಳಿಗೆ ಆದಷ್ಟು ಬೇಗ ಮುಕ್ತಿ ಕೊಡು ಎಂದು ಪ್ರಾರ್ಥಿಸುತ್ತೇನೆ. ಶಾಲೆಯಲ್ಲಿ ರಾಜಕಾರಣ ಮಾಡಲು ಬರಬೇಡಿ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಲು ಬಂದರೆ ಆ ಬಸವೇಶ್ವರ ನಿಮ್ಮನ್ನು ಭಸ್ಮ ಮಾಡದೆ ಬಿಡನು. ನಾವು ಯಾವತ್ತೂ ಮುಂಬಾಗಿಲಿನಿಂದ ಬರುವವರು, ಹಿಂಬಾಗಿಲಿನಿಂದ ಬರುವವರಲ್ಲ’ ಎಂದು ಹೇಳಿಕೆ ನೀಡಿದರು.
ಇದೇ ವೇಳೆ ಶಾಲಾ ಮಕ್ಕಳಿಂದ ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕಿಸಿರುವುದೂ ವಿಡಿಯೋದಲ್ಲಿ ಕಂಡುಬಂದಿದೆ. ಶಾಸಕರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!