ಟ್ವಿಟರ್ ಎಂದು ಫೇಮಸ್ ಆಗಿದ್ದ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ನಂತರ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಖರೀದಿಸಿದ್ದು ನಿಮಗೆಲ್ಲಾ ತಿಳಿದೇ ಇದೆ. ಎಲಾನ್ ಮನಸು ಮಾಡಿದರೆ ಯಾವ ಸಂಸ್ಥೆಯನ್ನಾದರು ಚಿಟಿಕೆ ಹೊಡೆಯುವ ಒಳಗೆ ಖರೀದಿಸಬಹುದು. ಹಾಗೆ ಟ್ವಿಟರ್ ಖರೀದಿಸಿದ ಮಸ್ಕ್ ಭಾರತೀಯ ಮೂಲದ ಸಿಇಒ ಅನ್ನು ಕಿತ್ತೆಸೆದು ಹೊಸ ಹೆಸರು ನಾಮಕರಣ ಮಾಡಿದ್ದರು.
ಟ್ವಿಟರ್ ಅನ್ನು ಎಕ್ಸ್ ಎಂದು ಬದಲಾಯಿಸಿದ್ದರು. ಹಾಗೆ ಈ ಟ್ವಟಿರ್ ಅನ್ನು ಲಾಭದಾಯಕವನ್ನಾಗಿ ಮಾಡುವ ಉದ್ದೇಶದಿಂದ ಹಲವು ರೀತಿಯ ಬದಲಾವಣೆಗಳ ಜಾರಿ ಮಾಡಿದ್ರು. ಬಹುತೇಕ ಅದರಲ್ಲಿ ಮಸ್ಕ್ ಯಶಸ್ವಿಯೂ ಆಗಿದ್ದರು. ಆದ್ರೆ ಬರು ಬರುತ್ತಾ ಮಸ್ಕ್ ಮಾಲಿಕತ್ವದ ಎಕ್ಸ್ ಮೇಲೆ ಹಲವು ರೀತಿಯ ದೂರುಗಳು, ಆರೋಪಗಳು ಕೇಳಿಬಂದವು.
ಅಮೆರಿಕ ಚುನಾವಣೆಯಲ್ಲಿ ಎಕ್ಸ್ ಅನ್ನು ಒಂದು ಪಕ್ಷದ ಪರವಾದ ಚಿಂತನೆಗಳ ಹರಡಲು ಬಳಸಲಾಯಿತು ಎಂಬ ಗಂಭೀರ ಆರೋಪಗಳು ಕೂಡ ಕೇಳಿಬಂದವು. ಹಾಗೆ ಎಲಾನ್ ಮಸ್ಕ್ ವಾಕ್ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳುಬಂದವು. ಹಾಗೆ ಇಂಗ್ಲೆಂಡ್‌ನ ದೈತ್ಯ ಮಾಧ್ಯಮ ಸಂಸ್ಥೆ ಗಾರ್ಡಿಯನ್ ಇನ್ನು ಮುಂದೆ ಎಕ್ಸ್‌ನಲ್ಲಿ ಯಾವುದೇ ಪೋಸ್ಟ್ ಹಾಕುವುದಿಲ್ಲ ಎಂದು ಘೋಷಿಸಿತು.
ಗಾರ್ಡಿಯನ್ ಮಾಧ್ಯಮ ಸಂಸ್ಥೆಯ ಈ ನಿರ್ಧಾರ ಹಲವರಿಗೆ ಅಚ್ಚರಿ ತಂದಿತ್ತಲ್ಲದೆ ಎಕ್ಸ್ ಅನ್ನು ಗಾರ್ಡಿಯನ್ ಟಾಕ್ಸಿಕ್ ಮೀಡಿಯಾ ಪ್ಲಾಟ್‌ಫಾರ್ಮ್ ಎಂದು ಕರೆದಿತ್ತು. ಇದಾದ ಬಳಿಕ ಹಲವು ಬಾಲಿವುಡ್ ನಟ ನಟಿಯರು, ಖ್ಯಾತ ಉದ್ಯಮಿಗಳು ಸೇರಿ ಲಕ್ಷ ಮಂದಿ ಎಕ್ಸ್ ಬಿಟ್ಟು ಹೊರಬರುವುದಾಗಿ ಘೋಷಿಸಿದರು. ಇದು ಜಗತ್ತಿನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ.
ಸದ್ಯ ಇದು ಎಲಾನ್ ಮಸ್ಕ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದರೆ ಇನ್ನೊಂದು ಕಡೆ ಮಸ್ಕ್ ಅವರ ಎಕ್ಸ್‌ಗೆ ಪ್ರತಿಯಾಗಿ ಮತ್ತೊಂದು ಹೊಸ ಜಾಲತಾಣ ಈಗ ಆರಂಭಗೊಂಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಬ್ಲೂ ಸ್ಕೈ (BlueSky) ಎಂದು ಕರೆಲ್ಪಡುವ ಈ ಪ್ಲಾಟ್‌ಫಾರ್ಮ್ ಈಗ ಹೊಸ ಅಚ್ಚರಿ ಮೂಡಿಸುತ್ತಿದೆ.
ಜೇಮೀ ಲೀ ಕರ್ಟಿಸ್, ಎಲ್ಟನ್ ಜಾನ್, ಮಿಯಾ ಫಾರೋ, ವೂಪಿ ಗೋಲ್ಡ್ ಬರ್ಗ್ ಮತ್ತು ಸುದ್ದಿ ನಿರೂಪಕ ಡಾನ್ ಲೆಮನ್ ಸೇರಿದಂತೆ ಖ್ಯಾತನಾಮರು ಎಕ್ಸ್ ತೊರೆಯುವುದಾಗಿ ಘೋಷಿಸಿದ ಬಳಿಕ ಭಾರೀ ಸದ್ದು ಮಾಡಿತ್ತು.
ಬ್ಲೂ ಸ್ಕೈ ಆರಂಭಿಸಿದ್ದು ಯಾರು?
ಎಕ್ಸ್ ಬದಲು ಎಲ್ಲರು ಬ್ಲೂ ಸ್ಕೈ ಬಳಸಲು ಮುಂದಾಗುತ್ತಿದ್ದಾರೆ. ಈಗಾಗಲೇ ಮಿಲಿಯನ್‌ಗೂ ಅಧಿಕ ಡೌನ್‌ಲೋಡ್ ಪಡೆದುಕೊಂಡಿದೆ. ಅಚ್ಚರಿ ಎಂದರೆ ಈ ಮಾಧ್ಯಮವನ್ನೂ ಕೂಡ ಟ್ವಿಟರ್ ಸಂಸ್ಥಾಪಕ ಜ್ಯಾಕ್ ಡೋರ್ಸೆ 2019ರಲ್ಲಿ ಆರಂಭಿಸಿದ್ದರು. ಆದ್ರೆ ಈ ಆಪ್ ಅನ್ನು ಎಲ್ಲಿಯೂ ಪ್ರಚಾರ ಮಾಡಿರಲಿಲ್ಲ. ಸೆಪ್ಟೆಂಬರ್ ಒಂದೇ ತಿಂಗಳಿನಲ್ಲಿ ಸುಮಾರು 9 ಮಿಲಿಯನ್ ಹೊಸ ಬಳಕೆದಾರರನ್ನು ಸೇರಿಸಿಕೊಂಡು ಒಟ್ಟು ಬಳಕೆದಾರರ ಸಂಖ್ಯೆ ಈಗ 15 ಮಿಲಿಯನ್‌ಗೂ ಅಧಿಕವಾಗಿದೆ.