ಮಿಳುನಾಡು: ಮದುವೆಗೆ ನಿರಾಕರಣೆ ಮಾಡಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಶಾಲೆಯಲ್ಲಿಯೇ ಶಿಕ್ಷಕಿಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ತಂಜಾವೂರು ಜಿಲ್ಲೆಯ ಮಲ್ಲಿಪಟ್ಟಿನಂ ಬಳಿಯ ಚಿನ್ನಮನೈ ನಡೆದಿದೆ.ಮೃತ ಶಿಕ್ಷಕಿಯನ್ನು 26 ವರ್ಷದ ರಮಣಿ ಎಂದು ಗುರುತಿಸಲಾಗಿದೆ.
ಚಿನ್ನಮನೈನ 30 ವರ್ಷದ ಮದನ್ ಎಂಬಾತ ರಮಣಿ ಮೇಲೆ ಆರಮಲ್ಲಿಪಟ್ಟಿನಂ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರಮಣಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.
ಮದುವೆ ವಿಚಾರವಾಗಿ ಮದನ್ ಮತ್ತು ಅವರ ಕುಟುಂಬವು ಕೆಲವು ದಿನಗಳ ಹಿಂದೆ ರಮಣಿಯ ಕುಟುಂಬವನ್ನು ಭೇಟಿಯಾಗಿದ್ದರು. ಈ ವೇಳೆ ಇಬ್ಬರು ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಆದರೆ ಈಚೆಗೆ ರಮಣಿ ಮದುವೆಗೆ ನಿರಾಕರಣೆ ಮಾಡಿದ್ದರು.
ಆಕೆಯ ನಿರಾಕರಣೆಯಿಂದ ಕೋಪಗೊಂಡ ಮದನ್ ಬುಧವಾರ ಬೆಳಗ್ಗೆ ಸರ್ಕಾರಿ ಪ್ರೌಢಶಾಲೆಗೆ ತೆರಳಿ ರಮಣಿ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆಸಿದ್ದಾನೆ. ನಂತರ, ಕುತ್ತಿಗೆಗೆ ಆಳವಾದ ಗಾಯವಾಗಿದ್ದ ರಮಣಿಯನ್ನು ಶಾಲೆಯ ಅಧಿಕಾರಿಗಳು ಪಟ್ಟುಕೊಟ್ಟೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.
ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು. ಸೇತುಭಾವಛತ್ರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆಗಾಗಿ ಮದನ್ನನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.