ಬೆಂಗಳೂರು ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಸೇರಿದಂತೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಇವಿಎಂ ಬದಲಿಗೆ ಬ್ಯಾಲಟ್ ಬಾಕ್ಸ್ (ಮತಪೆಟ್ಟಿಗೆ) ಮೂಲಕವೇ ನಡೆಸಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ಈ ಸಂಬಂಧ ಹೊಸ ಮತಪೆಟ್ಟಿಗೆಗಳನ್ನು ಖರೀದಿ ಮಾಡಲು ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯವಿರುವ 128 ಕೋಟಿ ರೂಪಾಯಿ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಅವರು ಸ್ಪಷ್ಟಪಡಿಸಿದ್ದಾರೆ.

ಸಂಪುಟ ಸಭೆಯ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮತಪೆಟ್ಟಿಗೆಗಳ ಮೂಲಕವೇ ಚುನಾವಣೆ ನಡೆಸುವ ಸರ್ಕಾರದ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಹಾಗೂ ಈ ಕುರಿತು ಮರುಚಿಂತನೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಖಡಕ್ಕಾಗಿ ತಿಳಿಸಿದರು. ಚುನಾವಣಾ ಆಯೋಗದ ಬಳಿ ಈಗಾಗಲೇ ಒಂದಷ್ಟು ಮತಪೆಟ್ಟಿಗೆಗಳು ಲಭ್ಯವಿದ್ದು, ಕೊರತೆ ಇರುವ ಹೆಚ್ಚುವರಿ ಪೆಟ್ಟಿಗೆಗಳ ಖರೀದಿಗೆ ಹಣಕಾಸಿನ ಅಭಾವವಿಲ್ಲದಂತೆ ಸರ್ಕಾರ ನಿಧಿಯನ್ನು ಒದಗಿಸಿದೆ ಎಂದು ಅವರು ವಿವರಿಸಿದರು.

ಇದೇ ವೇಳೆ, ನೂತನವಾಗಿ ಪರಿಷ್ಕರಿಸಲಾದ ಮತದಾರರ ಪಟ್ಟಿಯ ಆಧಾರದ ಮೇಲೆ ಚುನಾವಣೆ ನಡೆಯಲಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್‌ಐಆರ್ (SIR) ಪ್ರಕ್ರಿಯೆಯ ನಂತರದ ಪರಿಷ್ಕೃತ ಪಟ್ಟಿಯ ಲಭ್ಯತೆಯ ಕುರಿತು ತಮಗೆ ಸದ್ಯಕ್ಕೆ ಮಾಹಿತಿಯಿಲ್ಲ ಎಂದರು. ರಾಜ್ಯ ಚುನಾವಣಾ ಆಯೋಗವು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಲಭ್ಯವಿರುವ ಯಾವ ಮತದಾರರ ಪಟ್ಟಿಯನ್ನು ಆಧರಿಸಿ ಚುನಾವಣೆ ನಡೆಸಬೇಕು ಎಂಬುದನ್ನು ಸ್ವತಃ ಆಯೋಗವೇ ಅಂತಿಮವಾಗಿ ತೀರ್ಮಾನಿಸಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು

Leave a Reply

Your email address will not be published. Required fields are marked *

Join WhatsApp Group
error: Content is protected !!