ಸರ್ಕಾರದ ಮುಂದೆ ಶರಣಾಗತಿಯಾಗಿರುವ ಚಿಕ್ಕಮಗಳೂರಿನ ಪ್ರಮುಖ ನಕ್ಸಲ್ ನಾಯಕಿ ಮುಂಡಗಾರು ಲತಾ (ಶ್ರೀಲತಾ) ಅವರನ್ನು 2018ರ ಹಳೆಯ ಬೆದರಿಕೆ ಹಾಗೂ ದರೋಡೆ ಪ್ರಕರಣವೊಂದರ ವಿಚಾರಣೆಗಾಗಿ ಮಂಗಳವಾರ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕಡಬ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಲತಾ ಅವರು 2025 ರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಮ್ಮುಖದಲ್ಲಿ ಸರ್ಕಾರಕ್ಕೆ ಶರಣಾಗತಿಯಾಗಿದ್ದರೂ, ಅವರ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹತ್ತಾರು ಗಂಭೀರ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ವಿಚಾರಣೆ ಹಾಗೂ ಸ್ಥಳ ಮಹಜರು ಪ್ರಕ್ರಿಯೆಗಳು ತೀವ್ರವಾಗಿ ನಡೆಯುತ್ತಿವೆ. 2018 ರಲ್ಲಿ ಕಡಬ ತಾಲೂಕಿನ ಶಿರಾಡಿ ಗ್ರಾಮದ ಮಿತ್ತಮಜಲು ನಿವಾಸಿಗಳಾದ ಸುರೇಶ ಹಾಗೂ ಲೀಲಾ ದಂಪತಿಯ ಮನೆಗೆ ಮುಂಡಗಾರು ಲತಾ ನೇತೃತ್ವದ ನಕ್ಸಲರ ತಂಡ ತಡರಾತ್ರಿ ಬಂದಿತ್ತು. ಮನೆಯವರನ್ನು ಮಾರಕಾಸ್ತ್ರಗಳಿಂದ ಬೆದರಿಸಿ, ಬಲವಂತವಾಗಿ ಊಟ ಮಾಡಿದ್ದಲ್ಲದೆ ಮನೆಯಲ್ಲಿದ್ದ ಅಕ್ಕಿ ಮತ್ತು ಪಡಿತರ ಸಾಮಾಗ್ರಿಗಳನ್ನು ಕಸಿದುಕೊಂಡು ಪರಾರಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬವು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಪ್ರಸ್ತುತ ಈ ಪ್ರಕರಣದ ತನಿಖೆ ಕಡಬ ತಾಲೂಕು ವ್ಯಾಪ್ತಿಗೆ ಬರುವುದರಿಂದ ಕಾನೂನು ಪ್ರಕ್ರಿಯೆ ಆರಂಭಗೊಂಡಿದೆ.ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ನಕ್ಸಲ್ ಲತಾ ಅವರನ್ನು ಮಂಗಳೂರು ಹಾಗೂ ಕಾವಲು ಪಡೆ ಪೊಲೀಸರು ಅತ್ಯಂತ ಬಿಗಿ ಬಂದೋಬಸ್ತ್‌ನಲ್ಲಿ ಉಪ್ಪಿನಂಗಡಿ ಠಾಣೆಗೆ ಕರೆತಂದು, ಕಡಬ ಸಂಚಾರಿ ನ್ಯಾಯಾಲಯದ (Kadaba Mobile Court) ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಬಳಿಕ ಸಂಜೆ ವೇಳೆಗೆ ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಆಕೆಯ ಆರೋಗ್ಯ ತಪಾಸಣೆ (Medical Check-up) ನಡೆಸಿ, ಉಪ್ಪಿನಂಗಡಿ ಠಾಣೆಗೆ ಕರೆದೊಯ್ಯಲಾಗಿದೆ.ಬುಧವಾರ (ನವೆಂಬರ್ 4) ಶಿರಾಡಿಯ ಮಿತ್ತಮಜಲಿನಲ್ಲಿರುವ ಸುರೇಶ್ ಅವರ ಮನೆಗೆ ಲತಾ ಅವರನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು (Spot Inspection) ನಡೆಸಲಾಗುತ್ತದೆ. ಬಳಿಕ ಗುರುವಾರ ಆಕೆಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿ, ಅಲ್ಲಿಂದ ಪುನಃ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆದೊಯ್ಯಲಾಗುವುದು ಎಂದು ಉಪ್ಪಿನಂಗಡಿ ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.

Leave a Reply

Your email address will not be published. Required fields are marked *

Join WhatsApp Group
error: Content is protected !!