ಕೆಲಸ ಸಿಕ್ಕರೆ ಸಾಕು, ಊರು ಬಿಟ್ಟು ಬೇರೆ ರಾಜ್ಯಕ್ಕೆ ಹೋಗಲು ಸಿದ್ಧರಾಗುವ ಯುವಕರು ಹಲವರಿದ್ದಾರೆ. ಕೆಲವರಿಗೆ ಉದ್ಯೋಗದ ಕಾರಣಕ್ಕೆ ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ರಾಜ್ಯವೇ ಬದಲಾವಣೆಯಾಗುತ್ತದೆ. ಹೀಗೆ ಬೇರೆ ರಾಜ್ಯಕ್ಕೆ ಹೋಗುವಾಗ ಮನೆ ಬದಲಿಸುವುದಷ್ಟೇ ಅಲ್ಲ, ತಮ್ಮ ಕಾರು ಅಥವಾ ಬೈಕ್ನ ನೋಂದಣಿ ವಿಚಾರದಲ್ಲೂ ಹಲವು ಕಿರಿಕಿರಿಗಳನ್ನು ಎದುರಿಸಬೇಕಾಗುತ್ತದೆ.
ಹೊಸ ರಾಜ್ಯದಲ್ಲಿ ವಾಹನ ಬಳಸಲು ನೋಂದಣಿ ಬದಲಾವಣೆ, ರಸ್ತೆ ತೆರಿಗೆ ಪಾವತಿ, ಅಗತ್ಯ ದಾಖಲೆಗಳ ಸಲ್ಲಿಕೆ ಹೀಗೆ ಒಂದೆರಡು ಕೆಲಸಗಳಲ್ಲ!
ಆದರೆ, ಇನ್ನು ಮುಂದೆ ಇಂತಹ ತೊಂದರೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ವಾಹನ ಮಾಲೀಕರ ಈ ಸಮಸ್ಯೆಗೆ ಪರಿಹಾರವಾಗಿ ಕೇಂದ್ರ ಸರ್ಕಾರ BH (Bharat Series) ನಂಬರ್ ಪ್ಲೇಟ್ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ನಂಬರ್ ಪ್ಲೇಟ್ ಹೊಂದಿದ್ದರೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋದರೂ ಹೊಸ ನೋಂದಣಿ ಸಂಖ್ಯೆ ಪಡೆಯುವ ಅಗತ್ಯವಿಲ್ಲ. ವಿಶೇಷವಾಗಿ ಉದ್ಯೋಗದ ನಿಮಿತ್ತ ಆಗಾಗ್ಗೆ ವರ್ಗಾವಣೆಯಾಗುವವರಿಗೆ ಇದು ದೊಡ್ಡ ಅನುಕೂಲ.
ಹಾಗಾದರೆ BH ಸೀರೀಸ್ ನಂಬರ್ ಪ್ಲೇಟ್ ಯಾರಿಗೆ ಸಿಗುತ್ತದೆ? ಸಾಮಾನ್ಯ ವಾಹನ ನೋಂದಣಿಗೂ ಇದಕ್ಕೂ ಏನು ವ್ಯತ್ಯಾಸ? ರಸ್ತೆ ತೆರಿಗೆ ಎಷ್ಟು ಪಾವತಿಸಬೇಕು? ನಿಮ್ಮ ವಾಹನಕ್ಕೂ ಈ ನಂಬರ್ ಪ್ಲೇಟ್ ಪಡೆಯಬಹುದೇ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಏನಿದು BH ಸೀರೀಸ್ ನಂಬರ್ ಪ್ಲೇಟ್? ವಾಹನ ಮಾಲೀಕರಿಗೆ ಹೇಗೆ ಸಹಾಯವಾಗುತ್ತದೆ?
ನೀವು ಕರ್ನಾಟಕದಲ್ಲಿ ಕಾರು ಖರೀದಿಸಿ KA ನೋಂದಣಿ ಸಂಖ್ಯೆಯನ್ನು ಪಡೆದಿದ್ದೀರಿ ಎಂದುಕೊಳ್ಳಿ. ಉದ್ಯೋಗದ ನಿಮಿತ್ತ ಮಹಾರಾಷ್ಟ್ರ, ದೆಹಲಿ ಅಥವಾ ಬೇರೆ ರಾಜ್ಯಕ್ಕೆ ಸ್ಥಳಾಂತರವಾದರೆ, ಅಲ್ಲಿ 12 ತಿಂಗಳಿಗಿಂತ ಹೆಚ್ಚು ಕಾಲ ವಾಹನ ಬಳಸುವ ಸಂದರ್ಭದಲ್ಲಿ ಸಾಮಾನ್ಯವಾಗಿ ಹೊಸ ರಾಜ್ಯದ ನೋಂದಣಿ ಗುರುತು ಪಡೆಯಬೇಕಾಗುತ್ತದೆ.
ಇದಕ್ಕಾಗಿ ದಾಖಲೆ ಸಲ್ಲಿಕೆ, ಹೊಸ ರಾಜ್ಯದಲ್ಲಿ ರಸ್ತೆ ತೆರಿಗೆ ಪಾವತಿ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಈಗಾಗಲೇ ಹಳೆಯ ರಾಜ್ಯದಲ್ಲಿ ಪಾವತಿಸಿರುವ ತೆರಿಗೆಯನ್ನು ಮರುಪಡೆಯುವ ಪ್ರಕ್ರಿಯೆಯೂ ಎದುರಾಗಬಹುದು.
ಇಂತಹ ಸಮಸ್ಯೆಗಳಿಗೆ ಪರಿಹಾರ ನೀಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) 2021ರಲ್ಲಿ ಭಾರತ್ ಸೀರೀಸ್ (BH Series) ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತಂದಿತು.
ಈ ವ್ಯವಸ್ಥೆಯ ವಿಶೇಷತೆ ಏನೆಂದರೆ, ಅರ್ಹತೆ ಹೊಂದಿರುವ ವಾಹನ ಮಾಲೀಕರು ದೇಶದ ಯಾವುದೇ ರಾಜ್ಯಕ್ಕೆ ಸ್ಥಳಾಂತರವಾದರೂ ಹೊಸ ನೋಂದಣಿ ಸಂಖ್ಯೆಯನ್ನು ಪಡೆಯುವ ಅಗತ್ಯವಿಲ್ಲ. ಅಂದರೆ, ನಿಮ್ಮ ವಾಹನದ BH ನೋಂದಣಿ ದೇಶದಾದ್ಯಂತ ಮುಂದುವರಿಯುತ್ತದೆ.
ಎಲ್ಲರಿಗೂ ಸಿಗುತ್ತಾ ಈ ನಂಬರ್ ಪ್ಲೇಟ್? ಅರ್ಹರು ಯಾರು?
BH ಸೀರೀಸ್ ನಂಬರ್ ಪ್ಲೇಟ್ ಬಗ್ಗೆ ತಿಳಿದುಕೊಂಡ ಬಳಿಕ ಅದನ್ನು ಪಡೆಯಬೇಕು ಎಂದು ನಿಮಗೂ ಅನಿಸಿರಬಹುದು. ಆದರೆ ಈ ಸೌಲಭ್ಯ ಎಲ್ಲ ವಾಹನ ಮಾಲೀಕರಿಗೂ ಲಭ್ಯವಿಲ್ಲ. ನಿರ್ದಿಷ್ಟ ಉದ್ಯೋಗ ವರ್ಗಕ್ಕೆ ಸೇರಿದವರು ಮಾತ್ರ ಅರ್ಜಿ ಸಲ್ಲಿಸಬಹುದು.
ಅರ್ಹ ಉದ್ಯೋಗಿಗಳ ವಿವರ ಇಲ್ಲಿದೆ:
ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುವವರು.
ಕೇಂದ್ರ ಸರ್ಕಾರಿ ನೌಕರರು.
ರಾಜ್ಯ ಸರ್ಕಾರಿ ನೌಕರರು.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ PSU ಉದ್ಯೋಗಿಗಳು.
ಕನಿಷ್ಠ ನಾಲ್ಕು ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಚೇರಿಗಳನ್ನು ಹೊಂದಿರುವ ಖಾಸಗಿ ಕಂಪನಿಗಳ ಉದ್ಯೋಗಿಗಳು.









