ಮಗಳೊಂದಿಗೆ ಮನೆಯ ಕೊಠಡಿಯಲ್ಲಿದ್ದ ಕೆಲಸಗಾರನ ಮೇಲೆ ಕ್ರಿಕೆಟ್ ಬ್ಯಾಟ್ ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ (Crime) ನಡೆಸಿ ಕೊಲೆ ಮಾಡಿದ ಆರೋಪದ ಮೇಲೆ ತಂದೆಯೊಬ್ಬರನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ನಗರದ (Bengaluru) ಕೋಗಿಲು ಕ್ರಾಸ್‌ನಲ್ಲಿ ಈ ಘಟನೆ ನಡೆದಿದ್ದು, ಕೇರಳ ಮೂಲದ ಕಿರಣ್ (24) ಮೃತಪಟ್ಟಿದ್ದಾರೆ.
ಕೊಲೆ ಆರೋಪ ಎದುರಿಸುತ್ತಿರುವ ಆನಂದ್‌ರಾಜ್ (45) ಪೊಲೀಸರ ವಶದಲ್ಲಿದ್ದಾರೆ.
ತಮಿಳುನಾಡು ಮೂಲದ ಆನಂದ್‌ರಾಜ್ ಕೋಗಿಲು ಕ್ರಾಸ್‌ನಲ್ಲಿ ಪತ್ನಿ ಹಾಗೂ 19 ವರ್ಷದ ಮಗಳೊಂದಿಗೆ ವಾಸವಾಗಿದ್ದರು. ತಳ್ಳುಗಾಡಿ ತಯಾರಿಸುವ ಕೆಲಸ ಮಾಡುತ್ತಿದ್ದ ಅವರ ಬಳಿ ಕಿರಣ್ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆನಂದ್‌ರಾಜ್ ಅವರ ಮಗಳು ಮೈಸೂರಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು, ರಜೆ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದಳು.
ಮಂಗಳವಾರ ಬೆಳಗ್ಗೆ ಆನಂದ್‌ರಾಜ್ ದಂಪತಿ ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ಮಧ್ಯಾಹ್ನ ಕಾರಣಾಂತರಗಳಿಂದ ಮನೆಗೆ ವಾಪಸ್ ಬಂದಾಗ ಮಗಳು ಮತ್ತು ಕಿರಣ್ ಕೊಠಡಿಯೊಂದರಲ್ಲಿ ಖಾಸಗಿಯಾಗಿ ಇರುವುದು ಕಂಡುಬಂದಿದೆ.
ಇದರಿಂದ ಆಕ್ರೋಶಗೊಂಡ ಆನಂದ್‌ರಾಜ್ ಮಗಳನ್ನು ಬೈದು ಸಂಬಂಧಿಕರ ಮನೆಗೆ ಕಳುಹಿಸಿದ್ದಾರೆ. ಬಳಿಕ ಕಿರಣ್‌ನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಕ್ರಿಕೆಟ್ ಬ್ಯಾಟ್ ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಕಿರಣ್ ಸಂಜೆ ವೇಳೆಗೆ ಅಸ್ವಸ್ಥಗೊಂಡಿದ್ದ. ಕೂಡಲೇ ಆನಂದ್‌ರಾಜ್ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಆರಂಭಿಸುವಷ್ಟರಲ್ಲಿ ಕಿರಣ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸಂಬಂಧ ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ಮೆಡಿಕೋ ಲೀಗಲ್ ಕೇಸ್ (ಎಂಎಲ್‌ಸಿ) ವರದಿ ನೀಡಿದ್ದಾರೆ. ಮಾಹಿತಿ ಪಡೆದ ಯಲಹಂಕ ಪೊಲೀಸರು ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದಾಗ ಯುವಕನ ಸಾವಿನ ಹಿಂದಿನ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆನಂದ್‌ರಾಜ್‌ನನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.









