ವೇಣೂರು ಸಮೀಪದ ಮೂಡುಕೋಡಿ ಪಂಜಲಬೈಲು ಎಂಬಲ್ಲಿ ನವೆಂಬರ್ 3ರಂದು ಸಂಜೆ ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಯುವಕ ಮೃತಪಟ್ಟಿದ್ದಾರೆ. ಮೃತ ಯುವಕನನ್ನು ಪೆರಾಡಿ ಗ್ರಾಮದ ನಿವಾಸಿ ಸ್ವಸ್ತಿಕ್ (26) ಎಂದು ಗುರುತಿಸಲಾಗಿದೆ.

ಮೃತ ಸ್ವಸ್ತಿಕ್ ಅವರು ವೇಣೂರು ನಗರದಲ್ಲಿರುವ ಪ್ರಸಿದ್ಧ ಚಿನ್ನದ ಆಭರಣ ಮಳಿಗೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನವೆಂಬರ್ 3ರಂದು ಸಂಜೆ ದಿನನಿತ್ಯದಂತೆ ಮಳಿಗೆಯ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ, ಮೂಡುಕೋಡಿ ಪಂಜಲಬೈಲು ರಸ್ತೆಯಲ್ಲಿ ಎದುರಿನಿಂದ ಬಂದ ಆಟೋರಿಕ್ಷಾ ಹಾಗೂ ಬೈಕ್ ನಡುವೆ ಮುಖಾಮುಖಿ ಭೀಕರ ಢಿಕ್ಕಿ ಸಂಭವಿಸಿದೆ. ಢಿಕ್ಕಿಯಾದ ಭರಕ್ಕೆ ರಸ್ತೆಗೆ ಎಸೆಯಲ್ಪಟ್ಟ ಸ್ವಸ್ತಿಕ್ ಅವರ ತಲೆ ಹಾಗೂ ದೇಹಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ರಕ್ತಸ್ರಾವದಿಂದ ಬಳಲುತ್ತಿದ್ದ ಆಕೆಯನ್ನು ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮಾರ್ಗಮಧ್ಯೆ ಅವರ ಪ್ರಾಣಪಕ್ಷಿ ಹಾರಿಹೋಗಿದೆ.ಮೃತ ಯುವಕ ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ BNS 2023 ರ ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವೇಣೂರು ಪೊಲೀಸರು ಅಪಘಾತಕ್ಕೊಳಗಾದ ವಾಹನಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!