ಅಮೆರಿಕದಲ್ಲಿ ನಡೆದ ಅತ್ಯಂತ ಮಹತ್ವದ ಮಧ್ಯಂತರ ಚುನಾವಣೆಯಲ್ಲಿ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಭಾರಿ ಹಿನ್ನಡೆಗೆ ಇರಾನ್ವಿರುದ್ಧದ ಯುದ್ಧವೇ ಪ್ರಮುಖ ಕಾರಣ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಇದರ ಬೆನ್ನಲ್ಲೇ, ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಗಾಲಿಬಾಫ್ ಟ್ರಂಪ್ ಸರ್ಕಾರವನ್ನು ವ್ಯಂಗ್ಯ ಮಾಡಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಪೋಸ್ಟ್‌ಗೆ ಎಕ್ಸ್ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಗಾಲಿಬಾಫ್, ಟ್ರಂಪ್ ತಂಡದ ನಡೆಯನ್ನು ‘ಸೋತ ಜೂಜುಕೋರನ ಮನಸ್ಥಿತಿಎಂದು ಕರೆದಿದ್ದಾರೆ.

ನವೆಂಬರ್ 3ರಂದು ನಡೆದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎರಡರಲ್ಲೂ ಭಾರಿ ಬಹುಮತ ಗಳಿಸಿ ಅಧಿಕಾರಕ್ಕೇರಿದೆ. ಈ ಭಾರಿ ಸೋಲಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ಉಪಾಧ್ಯಕ್ಷ ವ್ಯಾನ್ಸ್, ‘ನಾವು ಸತ್ಯವನ್ನು ಒಪ್ಪಿಕೊಳ್ಳಬೇಕು. ಇರಾನ್ ವಿರುದ್ಧದ ಯುದ್ಧ ಮತ್ತು ದೇಶದಲ್ಲಿ ತೀವ್ರಗೊಂಡ ಬೆಲೆ ಏರಿಕೆಯೇ ಮತದಾರರು ನಮ್ಮ ಪಕ್ಷದಿಂದ ದೂರವಾಗಲು ಮುಖ್ಯ ಕಾರಣ. ಮುಂದಿನ 6 ವರ್ಷಗಳ ಕಾಲ ಸೆನೆಟ್‌ನಲ್ಲಿ ಅಧಿಕಾರ ಕಳೆದುಕೊಳ್ಳಲು ಈ ಯುದ್ಧ ಕಾರಣವಾಯಿತು. ಈ ಯುದ್ಧ ಅಗತ್ಯವಿತ್ತೇ? ಎಂದು ನಾವು ಆಲೋಚಿಸಬೇಕಿದೆ’ ಎಂದು ಹೇಳಿದ್ದಾರೆ.

ಇರಾನ್ ಸ್ಪೀಕರ್ ಗಾಲಿಬಾಫ್ ವ್ಯಂಗ್ಯ:

ಜೆಡಿ ವ್ಯಾನ್ಸ್ ಅವರ ದೀರ್ಘ ಪೋಸ್ಟ್‌ಗೆ ವ್ಯಂಗ್ಯವಾಡಿರುವ ಇರಾನ್ ಸಂಸತ್ತಿನ ಸ್ಪೀಕರ್ ಗಾಲಿಬಾಫ್, ‘ನಿಮ್ಮಲ್ಲಿ ಕಂಡುಬರುತ್ತಿರುವುದು ಸೋತ ಜೂಜುಕೋರನ ಮನಸ್ಥಿತಿ. ಜೂಜಿನ ಮೇಜಿನಿಂದ ಹೊರನಡೆಯಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ನಿಮ್ಮ ಬಾಸ್ ಟ್ರಂಪ್ ಅಮೆರಿಕವನ್ನು ಇಸ್ರೇಲ್-ಪರ ಪ್ರಪಾತಕ್ಕೆ ತಳ್ಳುತ್ತಾ ಯುದ್ಧದ ಮುಂದಿನ ಹಂತಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಇಲ್ಲಿ ವಿನಾಕಾರಣ ಭಾಷಣ ಮಾಡಿ ಕಾಲಹರಣ ಮಾಡುವ ಬದಲು, ಈ ಮಾತುಗಳನ್ನು ನಿಮ್ಮ ಬಾಸ್‌ಗೆ ಹೋಗಿ ಹೇಳಿ!’ ಎಂದು ತಿರುಗೇಟು ನೀಡಿದ್ದಾರೆ.

ಟ್ರಂಪ್ ಸಮರ್ಥನೆ:

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಯುದ್ಧದಿಂದ ಇಂಧನ ದರ ಏರಿಕೆಯಾಗಿ ಮತದಾರರ ಮೇಲೆ ಪರಿಣಾಮ ಬೀರಿದ್ದು ಹೌದು. ಆದರೆ ಜಗತ್ತಿನ ಪ್ರಮುಖ ಭಯೋತ್ಪಾದಕ ದೇಶವಾಗಿರುವ ಇರಾನ್ ಅಣುವಸ್ತ್ರ ಹೊಂದುವುದನ್ನು ತಡೆಯುವುದು ಈ ಸಣ್ಣ ಚುನಾವಣಾ ಸೋಲಿಗಿಂತ ಚಾರಿತ್ರಿಕವಾಗಿ ಅತ್ಯಂತ ಪ್ರಮುಖವಾಗಿದೆ’ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!