ಪುತ್ತೂರು: ತಾಲೂಕಿನಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹಲವು ದೂರುಗಳು ಕೇಳಿಬಂದಿದ್ದು, ಹಳೆಯ ವಿದ್ಯುತ್ ತಂತಿಗಳ ಬದಲಾವಣೆ, ಸಾಮರ್ಥ್ಯಕ್ಕೆ ತಕ್ಕಂತೆ ಪರಿವರ್ತಕಗಳ ಅಳವಡಿಕೆ ಹಾಗೂ ವಿದ್ಯುತ್ ತಂತಿಗಳಿಗೆ ತಾಗಿಕೊಂಡಿರುವ ಮರದ ಗೆಲ್ಲುಗಳ ತೆರವಿಗೆ ಆದ್ಯತೆ ನೀಡಬೇಕು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಹೇಳಿದರು.
ಬನ್ನೂರಿನ ಮೆಸ್ಕಾಂ ಉಪವಿಭಾಗದ ಕಚೇರಿಯಲ್ಲಿ ನ.5ರಂದು ನಡೆದ ಪುತ್ತೂರು ನಗರ ಮತ್ತು ಗ್ರಾಮಾಂತರ ಉಪವಿಭಾಗಗಳ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ವಿದ್ಯುತ್ ಸಮಸ್ಯೆ ಎದುರಾದಾಗ ದೂರವಾಣಿ ಕರೆ ಸ್ವೀಕರಿಸದಿರುವುದು, ಕಡಿಮೆ ವೋಲ್ಟೇಜ್, ಟಿಸಿ ಸಮಸ್ಯೆ, ಕೃಷಿ ಪಂಪ್‌ಸೆಟ್ ಸಂಪರ್ಕ ವಿಳಂಬ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯುತ್ ಕಾಮಗಾರಿಗಳಲ್ಲಿ ಅನುಭವವಿಲ್ಲದ ಕಾರ್ಮಿಕರನ್ನು ಬಳಸುತ್ತಿರುವುದರಿಂದ ತಪ್ಪು ಸಂಪರ್ಕಗಳು ಉಂಟಾಗುತ್ತಿವೆ ಎಂಬ ದೂರೂ ಕೇಳಿಬಂತು.
ಇದೇ ವೇಳೆ ಮೆಸ್ಕಾಂನ ಗುತ್ತಿಗೆ ಕಾಮಗಾರಿಗಳ ಹಂಚಿಕೆ, ಮರದ ಗೆಲ್ಲುಗಳ ಕಟಾವು, ಸುಳ್ಳು ಬಿಲ್ ಸೃಷ್ಟಿ, ವಾಹನ ಬಳಕೆ ಹಾಗೂ ಗ್ಯಾಂಗ್‌ಮ್ಯಾನ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಗುತ್ತಿಗೆದಾರ ಲಕ್ಷ್ಮೀನಾರಾಯಣ ಆರೋಪಿಸಿದರು. ಕೆಲವೇ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗುತ್ತಿದೆ ಎಂದು ದೂರಿದ ಅವರು, ಎಲ್ಲ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಮೆಸ್ಕಾಂ ಅಧಿಕಾರಿಯೊಬ್ಬರ ವಿರುದ್ಧ ಮಹಿಳಾ ಸಹಾಯಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನೂ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಕುರಿತು ಯಾವುದೇ ದೂರು ಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ಪುತ್ತೂರು ತಾಲೂಕಿನಲ್ಲಿ ಗೃಹಜ್ಯೋತಿ ಯೋಜನೆಯಡಿ ಸುಮಾರು 69,050 ಫಲಾನುಭವಿಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಸರಕಾರ ₹100 ಕೋಟಿಗೂ ಅಧಿಕ ಮೊತ್ತ ಪಾವತಿಸಿದೆ ಎಂದು ಉಮಾನಾಥ ಶೆಟ್ಟಿ ತಿಳಿಸಿದರು.
ಮೆಸ್ಕಾಂ ಮಂಗಳೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಕೆ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಶಂಕರ್ ಸಿ.ಎಚ್. ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.









