ಏಳು ಮಂದಿಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಇಂದುಶೇಖರ್‌ನ ಕೃತ್ಯದ ಒಂದೊಂದೇ ಭಯಾನಕ ಸಂಗತಿಗಳು ಬಯಲಾಗುತ್ತಿವೆ.

ಮೊದಲೇ ಸಂಚು ರೂಪಿಸಿ ಒಬ್ಬೊಬ್ಬರನ್ನೇ ಮನೆಗೆ ಕರೆಸಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಇದೀಗ ಈ ಕೊಲೆ ಕೃತ್ಯಕ್ಕೆ ಆರೋಪಿ ಮಗಳೂ ಸಾಥ್ ನೀಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.

ಪತ್ನಿ ಪದೇ ಪದೇ ತವರು ಮನೆಗೆ ಹೋಗುತ್ತಿದ್ದಾಳೆ ಎಂಬ ವಿಚಾರಕ್ಕೆ ಇಂದುಶೇಖರ್ ಸಿಟ್ಟಾಗುತ್ತಿದ್ದ ಎನ್ನಲಾಗಿದೆ. ಅಲ್ಲದೆ, ಗಂಡ-ಹೆಂಡತಿ ನಡುವಿನ ಸಂಬಂಧಕ್ಕೆ ಪತ್ನಿಯ ಮನೆಯವರು ಅಡ್ಡಿಯಾಗುತ್ತಿದ್ದಾರೆ ಎಂದು ಭಾವಿಸಿ ಅವರನ್ನು ಹತ್ಯೆ ಮಾಡಲು ನಿರ್ಧರಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಮೊದಲು ಪತ್ನಿಯನ್ನು ಮನೆಯಲ್ಲೇ ಕೊಲೆ ಮಾಡಿದ್ದ ಆರೋಪಿ, ಬಳಿಕ ಮೃತದೇಹವನ್ನು ತನ್ನ ಕಾರಿನಲ್ಲೇ ಸಾಗಿಸಿದ್ದ ಎನ್ನಲಾಗಿದೆ. ನಂತರ ಪತ್ನಿ ತನ್ನ ಸ್ನೇಹಿತೆಯೊಂದಿಗೆ ಟ್ರಿಪ್‌ಗೆ ಹೋಗಿದ್ದಾಳೆ ಎಂದು ಕಥೆ ಕಟ್ಟಿದ್ದ. ಅಕ್ಕಪಕ್ಕದ ಮನೆಯವರು ಹಾಗೂ ತನ್ನ ಸ್ನೇಹಿತರ ಬಳಿಯೂ ಇದೇ ಸುಳ್ಳು ಕಥೆಯನ್ನು ಹೇಳಿ ಯಾರಿಗೂ ಅನುಮಾನ ಬಾರದಂತೆ ನೋಡಿಕೊಂಡಿದ್ದ. ಅಲ್ಲದೆ, ಪತ್ನಿಯ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಆಕೆ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬಂತೆ ಬಿಂಬಿಸಿದ್ದ ಎನ್ನಲಾಗಿದೆ.

ಪತ್ನಿಯ ಹತ್ಯೆ ಬಳಿಕ ತನ್ನ ಯೋಜನೆಯಂತೆ ಮುಂದಿನವರನ್ನು ಗುರಿಯಾಗಿಸಿಕೊಂಡಿದ್ದ ಇಂದುಶೇಖರ್, ಪಾರ್ಟಿ ಮಾಡೋಣ, ಎಣ್ಣೆ ಕುಡಿಸುತ್ತೇನೆ ಎಂದು ಹೇಳಿ ಬಾಮೈದ ಶಿವಕುಮಾರ್‌ನನ್ನು ಮನೆಗೆ ಕರೆಸಿಕೊಂಡಿದ್ದ ಎನ್ನಲಾಗಿದೆ. ಬಳಿಕ ಆತನನ್ನೂ ಹತ್ಯೆ ಮಾಡಿದ್ದಾನೆ ಎಂಬ ಆರೋಪವಿದೆ.

ಹೀಗೆ ಹಂತ ಹಂತವಾಗಿ ಒಬ್ಬೊಬ್ಬರನ್ನೇ ಮನೆಗೆ ಕರೆಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹತ್ಯೆಗೀಡಾದವರ ಮೃತದೇಹಗಳನ್ನು ತನ್ನ ಕಾರಿನಲ್ಲೇ ಸಾಗಾಟ ಮಾಡಿದ್ದಾನೆ ಎನ್ನಲಾಗಿದ್ದು, ಪತ್ನಿಯ ಮೃತದೇಹವನ್ನು ನಂದಿ ಬೆಟ್ಟದ ಬಳಿ ಸಾಗಿಸಿದ್ದ ಎಂಬ ಮಾಹಿತಿಯೂ ಹೊರಬಂದಿದೆ.

ಹತ್ಯೆ ಬಳಿಕ ರುಬ್ಬುಗಲ್ಲು ಸ್ವಚ್ಛಗೊಳಿಸಿದ್ದ ಆರೋಪಿ!

ಇನ್ನು ಕೊಲೆ ಕೃತ್ಯಕ್ಕೆ ಬಳಸಿದ್ದ ರುಬ್ಬುಗಲ್ಲನ್ನು ಹತ್ಯೆಯ ಬಳಿಕ ಆರೋಪಿ ಅಚ್ಚುಕಟ್ಟಾಗಿ ತೊಳೆದು ಸ್ವಚ್ಛಗೊಳಿಸಿಟ್ಟಿದ್ದ ಎನ್ನಲಾಗಿದೆ. ಸಾಕ್ಷ್ಯಗಳನ್ನು ಮರೆಮಾಚುವ ಉದ್ದೇಶದಿಂದ ಈ ರೀತಿ ಮಾಡಿದ್ದಾನೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯಬೇಕಿದೆ.

ಅಪ್ಪನ ಕೃತ್ಯಕ್ಕೆ ಮಗಳೂ ಸಾಥ್ ನೀಡಿದ್ದಳಾ?

ಈ ನಡುವೆ ಪ್ರಕರಣಕ್ಕೆ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ಆರೋಪಿ ಇಂದುಶೇಖರ್‌ನ ಕೊಲೆ ಕೃತ್ಯಕ್ಕೆ ಆತನ ಪಿಯುಸಿ ಓದುತ್ತಿರುವ ಮಗಳೂ ಸಾಥ್ ನೀಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಮಗಳನ್ನು ಮಾತ್ರ ಬಿಟ್ಟು ಉಳಿದವರನ್ನೆಲ್ಲ ಹತ್ಯೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಗಳ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕಳೆದ ಎಂಟು ವರ್ಷಗಳಿಂದ ಭಾಷ್ಯಾಂ ಸರ್ಕಲ್ ಬಳಿ ಇರುವ ಬಾಡಿಗೆ ಮನೆಯಲ್ಲಿ ಇಂದುಶೇಖರ್ ವಾಸವಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಒಟ್ಟಿನಲ್ಲಿ, ಮೊದಲೇ ಸಂಚು ರೂಪಿಸಿ ಪತ್ನಿಯಿಂದ ಆರಂಭಿಸಿ ಒಬ್ಬೊಬ್ಬರನ್ನೇ ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿರುವ ಇಂದುಶೇಖರ್ ಪ್ರಕರಣದಲ್ಲಿ ಮಗಳ ಪಾತ್ರದ ಬಗ್ಗೆಯೂ ಅನುಮಾನ ಮೂಡಿದೆ. ಈ ಭೀಕರ ಹತ್ಯಾಕಾಂಡದ ಹಿಂದಿನ ಸಂಪೂರ್ಣ ಸತ್ಯ ತನಿಖೆಯಿಂದ ಹೊರಬರಬೇಕಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!