ಮಂಗಳೂರು: ವ್ಯಕ್ತಿಯೊಬ್ಬರನ್ನು ಬೆದರಿಸಿ ಪದೇಪದೆ ಹಣ ವಸೂಲಿ ಮಾಡಿದ ಆರೋಪದ ಮೇಲೆ ಮಂಗಳೂರು ದಕ್ಷಿಣ ಪೊಲೀಸರು ಮೂವರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಂಗಳೂರು ನಗರ ದಕ್ಷಿಣ ಪೊಲೀಸ್ ಠಾಣೆಯ ಸಿಬ್ಬಂದಿ ಶಿವರಾಜ್, ಮಂಗಳೂರು ನಗರ ಸಿಎಆರ್ ವಿಭಾಗದ ಹೊಯ್ಸಳ ವಾಹನ ಚಾಲಕ ಈರಣ್ಣ ಬೆನ್ನಿ ಹಾಗೂ ದಕ್ಷಿಣ ಪೊಲೀಸ್ ಠಾಣೆಯ ಸಿಬ್ಬಂದಿ ಉಮಾನಾಥ್ ಎಂದು ಗುರುತಿಸಲಾಗಿದೆ. ಪಾಂಡೇಶ್ವರದಲ್ಲಿ ವಾಸವಿರುವ ವಿಟ್ಲ ಮೂಲದ ರವಿರಾಜ್ ಅವರು ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.
ದೂರಿನ ಪ್ರಕಾರ, ಆ. 25ರಂದು ಸಂಜೆ ನೆಹರು ಮೈದಾನದಲ್ಲಿ ವಾಕಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದ ರವಿರಾಜ್ ಅವರನ್ನು ಆರ್‌ಟಿಒ ಕಚೇರಿ ಬಳಿ ಗಸ್ತು ವಾಹನದಲ್ಲಿ ಬಂದಿದ್ದ ಈರಣ್ಣ ಬೆನ್ನಿ ಮತ್ತು ಉಮಾನಾಥ್ ತಡೆದಿದ್ದರು. ಈ ವೇಳೆ ಶಿವರಾಜ್ ಲಾಠಿಯಿಂದ ಭುಜ ಮತ್ತು ಕಾಲಿಗೆ ಹೊಡೆದು, ಮೊಬೈಲ್ ಫೋನ್ ಕಸಿದುಕೊಂಡಿದ್ದಲ್ಲದೆ, ಫೋನ್ ಕವರ್‌ನಲ್ಲಿದ್ದ 300 ರೂ. ಹಣವನ್ನು ಬಲವಂತವಾಗಿ ಪಡೆದಿದ್ದರು. ಮತ್ತೆ ಮೈದಾನದ ಕಡೆಗೆ ಬಂದರೆ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆ. 27ರಂದು ರಾತ್ರಿ 9.30ರ ಸುಮಾರಿಗೆ ಅದೇ ಸಿಬ್ಬಂದಿ ಮತ್ತೆ ರವಿರಾಜ್ ಅವರನ್ನು ತಡೆದು ಮೊಬೈಲ್ ಫೋನ್, ಎರಡು ಎಟಿಎಂ ಕಾರ್ಡ್‌ಗಳು, 1,000 ರೂ. ನಗದು ಹಾಗೂ ಮೋಟಾರ್ ಸೈಕಲ್ ಕೀಲಿಯನ್ನು ಕಸಿದುಕೊಂಡಿದ್ದರು. ಬಳಿಕ ಗಸ್ತು ವಾಹನದಲ್ಲಿ ಕರೆದೊಯ್ದು ಎಟಿಎಂ ಮೂಲಕ 1,000 ರೂ. ಹಣ ಡ್ರಾ ಮಾಡಿಸಿದ್ದರು ಎಂದು ಆರೋಪಿಸಲಾಗಿದೆ.
ನ. 4ರಂದು ಮತ್ತೆ ಹಣಕ್ಕಾಗಿ ಪೀಡಿಸಿ ಮೋಟಾರ್ ಸೈಕಲ್ ವಶಕ್ಕೆ ಪಡೆದಿದ್ದರು. ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಎಚ್ಚರಿಸಿದಾಗ ಅಲ್ಲಿಂದ ತೆರಳಿದ್ದರು. ಅದೇ ರಾತ್ರಿ ಉಮಾನಾಥ್ ಕರೆ ಮಾಡಿ ಮೋಟಾರ್ ಸೈಕಲ್ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದರು ಎನ್ನಲಾಗಿದೆ.
ಪದೇಪದೆ ಕಿರುಕುಳ ಹಾಗೂ ಹಣ ವಸೂಲಿ ಆರೋಪದಿಂದ ಬೇಸತ್ತ ರವಿರಾಜ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಸಿಬ್ಬಂದಿಯನ್ನು ಬಂಧಿಸಿದ್ದಾರೆ.









