ಪುತ್ತೂರು: ಮಹಿಳೆಯೊಬ್ಬರ ಕರಿಮಣಿ ಸರ ಕಳವು ಮಾಡುತ್ತಿರುವಂತೆ ತಮ್ಮ ಫೋಟೋವನ್ನು ಎಡಿಟ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯ ಪ್ರಮುಖ ಹರಿಪ್ರಸಾದ್ ನೆಲ್ಲಿಕಟ್ಟೆ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಮ್ಮ ಫೋಟೋವನ್ನು ಮಹಿಳೆಯೊಬ್ಬರ ಕರಿಮಣಿ ಸರ ಕಳವು ಮಾಡುತ್ತಿರುವ ರೀತಿಯಲ್ಲಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಅಲ್ಲದೆ, 2012ರಲ್ಲಿ ನಡೆದ ಘಟನೆ ಎಂಬುದಾಗಿ ಉಲ್ಲೇಖಿಸಿ, ಪ್ರಕರಣದ ಸಂಖ್ಯೆಯನ್ನೂ ಪೋಸ್ಟ್‌ನಲ್ಲಿ ನಮೂದಿಸಲಾಗಿದೆ. ಆದರೆ, ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ಘಟನೆಗೂ ತಮಗೂ ಯಾವುದೇ ಸಂಬಂಧವಿಲ್ಲ. ಸುಳ್ಳು ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಹರಡುವ ಮೂಲಕ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ತಮ್ಮ ಫೋಟೋವನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿ ಮಾಡುವ ಉದ್ದೇಶದಿಂದ ಇಂತಹ ಪೋಸ್ಟ್ ಪ್ರಕಟಿಸಿರುವವರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಸತ್ಯಕ್ಕೆ ದೂರವಾದ ವಿಚಾರ
ಈ ಕುರಿತು ಪ್ರತಿಕ್ರಿಯಿಸಿರುವ ಹರಿಪ್ರಸಾದ್ ನೆಲ್ಲಿಕಟ್ಟೆ, ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಪೋಸ್ಟ್‌ಗೂ ತಮಗೂ ಯಾವುದೇ ಸಂಬಂಧವಿಲ್ಲ. ಅದರಲ್ಲಿ ಉಲ್ಲೇಖಿಸಿರುವ ವಿಚಾರ ಸಂಪೂರ್ಣ ಸತ್ಯಕ್ಕೆ ದೂರವಾದದ್ದು. ಕಿಡಿಗೇಡಿಗಳು ಫೋಟೋವನ್ನು ಎಡಿಟ್ ಮಾಡಿ ಇಂತಹ ಪೋಸ್ಟ್‌ಗಳನ್ನು ಪ್ರಕಟಿಸುವ ಮೂಲಕ ತಮ್ಮ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!