ಕಾಂಗ್ರೆಸ್ ಸರ್ಕಾರದ(Congress Government) ಮಹಾತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲೊಂದಾದ(Gurantee Scheme) ಗೃಹಜ್ಯೋತಿಯ(Gruha Jyothi) ಉಚಿತ ವಿದ್ಯುತ್ ಸೌಲಭ್ಯದಲ್ಲಿ ನಡೆದಿರುವ ಅಕ್ರಮಗಳನ್ನು ಪತ್ತೆ ಹಚ್ಚಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(CM DK Shivakumar) ಅವರು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆದುಕೊಳ್ಳಲು ಸುಳ್ಳು ಮಾಹಿತಿ ನೀಡಿರುವ ಹಾಗೂ ನಿಯಮ ಉಲ್ಲಂಘಿಸಿರುವ ಗ್ರಾಹಕರನ್ನು ಪತ್ತೆ ಹಚ್ಚಲು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸುವಂತೆ ಸಿಎಂ ಆದೇಶ ಹೊರಡಿಸಿದ್ದು, ಸರ್ಕಾರ ಈಗ ಕಾರ್ಯಾಚರಣೆಗೆ ಸಜ್ಜಾಗಿದೆ.
ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಗ್ಯಾರಂಟಿ ಯೋಜನೆಗಳು ಸದ್ಯ ಸರ್ಕಾರದ ಖಜಾನೆಯ ಮೇಲೆ ಆರ್ಥಿಕ ಪರಿಣಾಮ ಬೀರುತ್ತಿವೆ. ಇತ್ತೀಚೆಗಷ್ಟೇ ಗೃಹಲಕ್ಷ್ಮಿ ಯೋಜನೆಯಲ್ಲಿ ಕೋಟಿ ಕೋಟಿ ರೂಪಾಯಿ ಗೋಲ್‌ಮಾಲ್ ನಡೆದಿರುವ ಬಗ್ಗೆ ಸಿಎಜಿ (CAG) ವರದಿಯಲ್ಲಿ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಿಎಂ ಡಿ.ಕೆ. ಶಿವಕುಮಾರ್, ಈಗ ಗೃಹಜ್ಯೋತಿ ಯೋಜನೆಗೂ ಕತ್ತರಿ ಪ್ರಯೋಗಿಸಲು ಮುಂದಾಗಿದ್ದಾರೆ.
ಪ್ರತಿಯೊಂದು ಮನೆಗೂ ಭೇಟಿ ನೀಡಲಿವೆ 4500 ಪ್ರತ್ಯೇಕ ತಂಡಗಳು
ಗೃಹಜ್ಯೋತಿ ಯೋಜನೆಯಡಿ ನಡೆದಿರುವ ಅಕ್ರಮ ಹಾಗೂ ದುರ್ಬಳಕೆಯನ್ನು ಬೇರು ಸಮೇತ ಕಿತ್ತೊಗೆಯಲು ರಾಜ್ಯ ಸರ್ಕಾರ ಭರ್ಜರಿ ತಯಾರಿ ನಡೆಸಿದ್ದು, ಒಟ್ಟು 4,500 ವಿಶೇಷ ತಂಡಗಳನ್ನು ರಚಿಸಿದೆ. ಇನ್ನು ಕೇವಲ ಎರಡರಿಂದ ಮೂರು ದಿನಗಳಲ್ಲಿ ಈ ಸಿಬ್ಬಂದಿಗಳ ತಂಡ ಅಧಿಕೃತವಾಗಿ ಫೀಲ್ಡ್‌ಗೆ ಇಳಿಯಲಿದ್ದು, ರಾಜ್ಯದ ಮೂಲೆ ಮೂಲೆಗಳಲ್ಲಿರುವ ಪ್ರತಿಯೊಂದು ಮನೆಗೂ ಖುದ್ದಾಗಿ ಭೇಟಿ ನೀಡಿ ಮೀಟರ್ ರೀಡಿಂಗ್ ಪರಿಶೀಲನೆ ನಡೆಸಲಿವೆ.
ರಾಜಧಾನಿ ಬೆಂಗಳೂರಿನಿಂದ ಆರಂಭವಾಗಲಿರುವ ಈ ತಪಾಸಣಾ ಪ್ರಕ್ರಿಯೆಯು ಹಂತ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆಯಾಗಲಿದೆ. ಈ ತಂಡಗಳು ಮನೆ ಮನೆಗೆ ತೆರಳಿ ಮೀಟರ್ ರೀಡಿಂಗ್ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ, ಯಾರೆಲ್ಲಾ ಅಕ್ರಮವಾಗಿ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ ಎಂಬುದರ ಸಂಪೂರ್ಣ ಪಟ್ಟಿ ಸಿದ್ಧಪಡಿಸಲಿವೆ. ತಪ್ಪು ಮಾಹಿತಿ ನೀಡಿ ಸಿಕ್ಕಿಬೀಳುವ ಗ್ರಾಹಕರ ಹೆಸರನ್ನು ತಕ್ಷಣವೇ ಡಿಫಾಲ್ಟ್ ಲಿಸ್ಟ್ (ಕಪ್ಪು ಪಟ್ಟಿ)ಗೆ ಸೇರಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸ್ವತಃ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ ಅವರು ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಈ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ







