ಪುತ್ತೂರು, ಆ.6: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳು ಅತ್ಯಂತ ಅಗತ್ಯವಾಗಿದ್ದು, ಇವು ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪುತ್ತೂರಿನ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸಿ. ಹೇಳಿದರು.ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ ಹಬ್ಬದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ‘ಫಿಲೋ ಪ್ರತಿಭಾ-2026’ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂತಹ ವೇದಿಕೆಗಳು ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಹೊರಹೊಮ್ಮಿಸಲು ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಮಹತ್ವ ನೀಡಬೇಕಿದೆ. ಈ ಉದ್ದೇಶದಿಂದಲೇ ಪ್ರತಿವರ್ಷ ‘ಫಿಲೋ ಪ್ರತಿಭಾ’ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.ದಕ್ಷಿಣ ಕನ್ನಡ ಜಿಲ್ಲೆಯ 37 ಪ್ರೌಢಶಾಲೆಗಳಿಂದ 750ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದು, ರಸಪ್ರಶ್ನೆ, ಇಂಗ್ಲಿಷ್ ವಿಚಾರ ಸಂಕಿರಣ, ಪೆನ್ಸಿಲ್ ಸ್ಕೆಚ್, ವಿಜ್ಞಾನ ಮಾದರಿ, ಮಣ್ಣಿನ ಮಾದರಿ, ದೇಶಭಕ್ತಿ ಗಾಯನ, ಕೊಲಾಜ್, ತ್ಯಾಜ್ಯದಿಂದ ಉಪಯುಕ್ತ ವಸ್ತು ತಯಾರಿ, ಫೇಸ್ ಪೈಂಟಿಂಗ್, ಛದ್ಮವೇಷ, ಲಾಂಚಿಂಗ್ ಪ್ರಾಡಕ್ಟ್, ಕನ್ನಡ ಕಂಠಪಾಠ, ರಂಗೋಲಿ ಹಾಗೂ ಜಾನಪದ ನೃತ್ಯ ಸೇರಿದಂತೆ 14 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಆಂಥೋನಿ ಒಲಿವೇರಾ, ‘ಫಿಲೋ ಪ್ರತಿಭಾ-2026’ ನಿರ್ದೇಶಕರಾದ ಸುಮಾ ಪಿ.ಆರ್. ಹಾಗೂ ರೋಹಿತ್ ಕುಮಾರ್ ಟಿ. ಉಪಸ್ಥಿತರಿದ್ದರು. ಸುಮಾ ಪಿ.ಆರ್. ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಗುಣಿಕಾ ಗುರುಪ್ರಸಾದ್ ವಂದಿಸಿದರು. ಉಪನ್ಯಾಸಕಿ ಸವಿತಾ ಮೊಂತೇರೋ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!