ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಸೆ.17ರಂದು ನಡೆದ ಗಣೇಶೋತ್ಸವ ವಿಸರ್ಜನಾ ಶೋಭಾಯಾತ್ರೆಯ ವೇಳೆ ಅನುಮತಿ ಅವಧಿ ಮುಗಿದ ಬಳಿಕ ಧ್ವನಿವರ್ಧಕ ಬಳಕೆ ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶೋಭಾಯಾತ್ರೆಯಲ್ಲಿ ಧ್ವನಿವರ್ಧಕ ಬಳಕೆಗೆ ರಾತ್ರಿ 10 ಗಂಟೆಯವರೆಗೆ ಷರತ್ತುಬದ್ಧ ಅನುಮತಿ ನೀಡಲಾಗಿತ್ತು. ಆದರೆ ರಾತ್ರಿ 10.35ರ ಸುಮಾರಿಗೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಜಂಕ್ಷನ್‌ನಲ್ಲಿದ್ದ ‘ಪಂಚಮುಖ ಫ್ರೆಂಡ್ಸ್’ ಸ್ತಬ್ಧಚಿತ್ರದಲ್ಲಿ ಧ್ವನಿವರ್ಧಕ ಬಳಕೆ ಮುಂದುವರಿದಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಪೊಲೀಸರು ಧ್ವನಿವರ್ಧಕ ಸ್ಥಗಿತಗೊಳಿಸುವಂತೆ ಸೂಚಿಸಿದ ಬಳಿಕ ಅದನ್ನು ಬಂದ್ ಮಾಡಲಾಗಿತ್ತು.ಈ ವೇಳೆ ಅಜಿತ್ ರೈ ಹೊಸಮನೆ ಹಾಗೂ ಇತರರು ಸ್ಥಳಕ್ಕೆ ಆಗಮಿಸಿ ಧ್ವನಿವರ್ಧಕ ಬಂದ್ ಮಾಡದಂತೆ ಹೇಳಿ, ಪುನಃ ಬಳಸುವಂತೆ ಸ್ತಬ್ಧಚಿತ್ರದ ಆಯೋಜಕರಿಗೆ ಸೂಚಿಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಧ್ವನಿವರ್ಧಕವನ್ನು ಪುನಃ ಬಳಸಲಾಗಿದ್ದು, ಅದನ್ನು ಸ್ಥಗಿತಗೊಳಿಸುವಂತೆ ಪೊಲೀಸರು ಸೂಚಿಸಿದರೂ ಪಾಲಿಸದೆ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳು ಹಾಗೂ ಕಾರ್ಯಕ್ರಮಕ್ಕೆ ವಿಧಿಸಲಾಗಿದ್ದ ಷರತ್ತುಗಳ ಬಗ್ಗೆ ಸ್ಥಳದಲ್ಲಿದ್ದವರಿಗೆ ತಿಳುವಳಿಕೆ ನೀಡಿದ್ದರೂ ಧ್ವನಿವರ್ಧಕ ಬಳಕೆ ಮುಂದುವರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಈ ಸಂಬಂಧ ಅಜಿತ್ ರೈ ಹೊಸಮನೆ, ಪಂಚಮುಖಿ ಫ್ರೆಂಡ್ಸ್ ಸ್ತಬ್ಧಚಿತ್ರದ ಆಯೋಜಕರು ಹಾಗೂ ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರು ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!