ಪುತ್ತೂರು: ಕೆಲ ದಿನಗಳ ಹಿಂದೆ ಪುತ್ತೂರಿನ ದರ್ಬೆಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಅಂಗಡಿ ಮಾಲಕಿ ಅಂಜನಾ ಎಸ್. ಪೈ ಅವರಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದ ಇಬ್ಬರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಚಿಕ್ಕಮುಡ್ನೂರು ತಾರಿಗುಡ್ಡೆ ನಿವಾಸಿ ಮಹಮ್ಮದ್ ನೌಷಾದ್ (32) ಹಾಗೂ ಪೆರ್ನೆ ನಿವಾಸಿ ಅಬ್ದುಲ್ ನಿಯಾಝ್ (26) ನಿರೀಕ್ಷಣಾ ಜಾಮೀನು ಪಡೆದ ಆರೋಪಿಗಳು.ಲ್ಯಾಮಿನೇಶನ್ ಮಾಡಲು ನೀಡಲಾಗಿದ್ದ ಜನನ ಪ್ರಮಾಣ ಪತ್ರಕ್ಕೆ ಹಾನಿಯಾದ ಘಟನೆಗೆ ಸಂಬಂಧಿಸಿ ಅಂಗಡಿ ಮಾಲಕರು ಹಾಗೂ ಗ್ರಾಹಕರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ನೂರಾರು ಮಂದಿ ಸ್ಥಳದಲ್ಲಿ ಸೇರಿದ್ದ ಸಂದರ್ಭ ಅಂಗಡಿ ಮಾಲಕಿ ಅಂಜನಾ ಎಸ್. ಪೈ ಅವರಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಪ್ರಕರಣದಲ್ಲಿ ಆರೋಪಿಗಳ ಪರ ವಕೀಲ ಅಬ್ದುಲ್ ರಹಿಮಾನ್ ಹಿರೇಬಂಡಾಡಿ ವಾದಿಸಿದ್ದರು.











