ಪುತ್ತೂರು: ರಾತ್ರಿ 10 ಗಂಟೆಯ ಬಳಿಕ ಧ್ವನಿವರ್ಧಕ ಬಳಕೆಗೆ ಇರುವ ನಿರ್ಬಂಧದ ಹಿನ್ನೆಲೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿದ್ದ ಸ್ತಬ್ಧಚಿತ್ರಗಳ ಧ್ವನಿವರ್ಧಕ ಬಳಕೆಯನ್ನು ಪೊಲೀಸರು ಸ್ಥಗಿತಗೊಳಿಸಿದ ಘಟನೆ ಗಾಂಧಿಕಟ್ಟೆ ಬಳಿ ನಡೆದಿದೆ.ಶ್ರೀ ಗಣೇಶನ ವಿಗ್ರಹವನ್ನು ಹೊತ್ತ ಮೂಷಿಕರಥದ ಮುಂಭಾಗದಲ್ಲಿ 12ಕ್ಕೂ ಅಧಿಕ ಸ್ತಬ್ಧಚಿತ್ರಗಳು ವಿವಿಧ ಪರಿಕಲ್ಪನೆ ಹಾಗೂ ಕಲಾತ್ಮಕ ವಿನ್ಯಾಸಗಳೊಂದಿಗೆ ನಿಗದಿತ ಸ್ಥಳಗಳಲ್ಲಿ ಪ್ರದರ್ಶನ ನೀಡುತ್ತಾ ಶೋಭಾಯಾತ್ರೆಯಲ್ಲಿ ಸಾಗುತ್ತಿದ್ದವು. ಧ್ವನಿ ಹಾಗೂ ಆಕರ್ಷಕ ವಿನ್ಯಾಸಗಳೊಂದಿಗೆ ಸಾಗುತ್ತಿದ್ದ ಸ್ತಬ್ಧಚಿತ್ರಗಳು ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದವು.ಶೋಭಾಯಾತ್ರೆ ಪುತ್ತೂರು ಬಸ್ ನಿಲ್ದಾಣದ ಗಾಂಧಿಕಟ್ಟೆ ಬಳಿ ತಲುಪುವ ವೇಳೆಗೆ ರಾತ್ರಿ 10 ಗಂಟೆಯಾಗಿದ್ದರಿಂದ ಪೊಲೀಸರು ಸ್ತಬ್ಧಚಿತ್ರಗಳಲ್ಲಿನ ಧ್ವನಿವರ್ಧಕ ಬಳಕೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರು. ಪ್ರದರ್ಶನ ಆರಂಭಗೊಂಡ ಬಳಿಕ ಅದನ್ನು ಅರ್ಧದಲ್ಲೇ ನಿಲ್ಲಿಸುವುದು ಸೂಕ್ತವಲ್ಲ ಎಂದು ಸಂಘಟಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆಲಕಾಲ ಪೊಲೀಸರು ಹಾಗೂ ಸಂಘಟಕರ ನಡುವೆ ಚರ್ಚೆ ನಡೆಯಿತು.ನಂತರ ಇನ್‌ಸ್ಪೆಕ್ಟರ್ ಜಾನ್ಸನ್ ಡಿ’ಸೋಜ ಅವರು ಮಧ್ಯಪ್ರವೇಶಿಸಿ ನಡೆಯುತ್ತಿದ್ದ ಒಂದು ಸ್ತಬ್ಧಚಿತ್ರದ ಪ್ರದರ್ಶನವನ್ನು ಪೂರ್ಣಗೊಳಿಸಲು ಅವಕಾಶ ನೀಡಿದರು. ಪ್ರದರ್ಶನ ಮುಗಿದ ಬಳಿಕ ಧ್ವನಿವರ್ಧಕ ಬಳಕೆಯನ್ನು ಸ್ಥಗಿತಗೊಳಿಸಲಾಯಿತು.ಧ್ವನಿವರ್ಧಕವಿಲ್ಲದೆ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಸುವುದು ನೀರಸವಾಗಲಿದೆ ಎಂಬ ಕಾರಣದಿಂದ ಬಸ್ ನಿಲ್ದಾಣದ ಬಳಿಯಿಂದ ಸ್ತಬ್ಧಚಿತ್ರಗಳ ಪ್ರದರ್ಶನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು. ಬಳಿಕ ಶ್ರೀ ಗಣೇಶನ ವಿಗ್ರಹವನ್ನು ಹೊತ್ತ ಮೂಷಿಕರಥದೊಂದಿಗೆ ಭಕ್ತರು ಶೋಭಾಯಾತ್ರೆಯಲ್ಲಿ ಮುಂದುವರಿದರು.ಸ್ತಬ್ಧಚಿತ್ರಗಳ ಪ್ರದರ್ಶನ ವೀಕ್ಷಿಸಲು ಗಾಂಧಿಕಟ್ಟೆಯಿಂದ ದರ್ಬೆಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಮಂದಿ ಕಾದು ಕುಳಿತಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ನಡೆಯದೆ ಹಲವರು ನಿರಾಶೆಯಿಂದ ಹಿಂದಿರುಗಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!