ಕಡಬ: ಕಟ್ಟಡ ತೆರವುಗೊಳಿಸುವ ಕಾಮಗಾರಿ ವೇಳೆ ಸಿಮೆಂಟ್‌ನ ಅವಶೇಷವೊಂದು ಕಾರ್ಮಿಕನ ಮೇಲೆ ಬಿದ್ದ ಪರಿಣಾಮ ಕಡಬ ತಾಲೂಕಿನ ಕೋಡಿಂಬಾಳದ ಯುವ ಕಾರ್ಮಿಕ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.ಮೃತರನ್ನು ಕೋಡಿಂಬಾಳ ಗ್ರಾಮದ ನಾಕೂರು ನಿವಾಸಿ ಆಲಿ ಅವರ ಪುತ್ರ ಝುಬೈರ್ (22) ಎಂದು ಗುರುತಿಸಲಾಗಿದೆ.ಬೆಳ್ತಂಗಡಿ ನಗರದ ಮೂರು ಮಾರ್ಗದ ಸಮೀಪ ಮಹಿಳಾ ಗ್ರಾಹಕರ ಸಹಕಾರಿ ಸಂಘಕ್ಕೆ ಸೇರಿದ ಕಟ್ಟಡವನ್ನು ತೆರವುಗೊಳಿಸುವ ಕಾಮಗಾರಿ ನಡೆಯುತ್ತಿತ್ತು. ಕಟ್ಟಡದ ಮೇಲ್ಭಾಗದಲ್ಲಿ ರಾಡ್‌ಗಳ ಸಹಿತ ಸಿಮೆಂಟ್ ಭಾಗವನ್ನು ತೆರವುಗೊಳಿಸುತ್ತಿದ್ದ ವೇಳೆ, ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಝುಬೈರ್ ಅವರ ಮೇಲೆ ಸಿಮೆಂಟ್‌ನ ದೊಡ್ಡ ತುಂಡು ಏಕಾಏಕಿ ಬಿದ್ದಿದೆ.ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಝುಬೈರ್ ಅವರನ್ನು ಸ್ಥಳೀಯರ ನೆರವಿನಿಂದ ತಕ್ಷಣ ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.ಝುಬೈರ್ ಅವರು ಕೋಡಿಂಬಾಳದ ವ್ಯಕ್ತಿಯೊಬ್ಬರ ಜತೆ ಕಂಪ್ರೆಸರ್ ಕೆಲಸಕ್ಕಾಗಿ ಬೆಳ್ತಂಗಡಿಗೆ ತೆರಳಿದ್ದರು ಎನ್ನಲಾಗಿದೆ. ಘಟನೆ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!