ಪುತ್ತೂರು: ಶಿವಳ್ಳಿ ಸಂಪದ ಬೊಳುವಾರು ವಲಯದ ಆಶ್ರಯದಲ್ಲಿ ಕೆಮ್ಮಾಯಿಯ ಶ್ರೀ ವಿಷ್ಣು ಮಂಟಪದಲ್ಲಿ ಆಯೋಜಿಸಲಾಗಿರುವ ಏಳು ದಿನಗಳ ‘ಹರಿವಂಶ ಪುರಾಣ ಪ್ರವಚನ’ ಸಪ್ತಾಹಕ್ಕೆ ಸೆ.15ರಂದು ಸಂಜೆ ಚಾಲನೆ ದೊರೆಯಿತು.ಕಾರ್ಯಕ್ರಮದಲ್ಲಿ ಆಶಿತ್ ಕೃಷ್ಣ ರಾವ್ ಪ್ರಾರ್ಥನೆ ನೆರವೇರಿಸಿದರು. ಹರಿಪ್ರಸಾದ್ ದಾಳಿಂಬ ಸ್ವಾಗತಿಸಿದರು. ಮೈಸೂರಿನ ಪ್ರಖ್ಯಾತ ಪ್ರವಚನಕಾರ ಡಾ. ಭ.ನಾ. ವಿಜಯೇಂದ್ರ ಆಚಾರ್ಯ ಅವರು ‘ಹರಿವಂಶ ಪುರಾಣ’ ಕುರಿತು ಮುಖ್ಯ ಪ್ರವಚನ ನೀಡಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ದೀಪ ಪ್ರಜ್ವಲನೆ ನೆರವೇರಿಸಿದ ಜಿ.ಎಲ್. ಸಮೂಹ ಸಂಸ್ಥೆಗಳ ಮಾಲಕ ಜಿ.ಎಲ್. ಬಲರಾಮ ಆಚಾರ್ಯ ಮಾತನಾಡಿ, ಪುತ್ತೂರಿನಲ್ಲಿ ಉತ್ತಮ ಸಂಘದ ಸಹಯೋಗದೊಂದಿಗೆ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಚಾರ. ‘ಹರಿವಂಶ ಪುರಾಣ’ದ ವಿಚಾರಗಳು ಎಲ್ಲರಿಗೂ ತಿಳಿಯುವಂತಾಗಲಿ ಹಾಗೂ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಮಂಗಳೂರಿನ ಶಾರದಾ ಮಹಾವಿದ್ಯಾಲಯದ ಸಂಸ್ಥಾಪಕ ಎಂ.ಬಿ. ಪುರಾಣಿಕ್ ಮುಖ್ಯ ಅತಿಥಿಯಾಗಿ ಮಾತನಾಡಿ, ಮಕ್ಕಳಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಂಸ್ಕೃತಿಯ ಮೌಲ್ಯಗಳು ಮನೆಯಲ್ಲಿಯೇ ಬೆಳೆದುಬರಬೇಕು. ಹೆತ್ತವರು ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನು ರೂಢಿಸಬೇಕು. ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದು ಹಾರೈಸಿದರು.ಡಾ. ಮಾಧವ ಭಟ್ ಕಾರ್ಯಕ್ರಮವನ್ನು ಪರಿಚಯಿಸಿದರು. ಶಿವಳ್ಳಿ ಸಂಪದ ಬೊಳುವಾರು ವಲಯದ ಅಧ್ಯಕ್ಷ ಅನಂತಕೃಷ್ಣ ಪಟ್ಟಲ್ಲಾಯ ಅಧ್ಯಕ್ಷತೆ ವಹಿಸಿದ್ದರು.ಗೌರವ ಉಪಸ್ಥಿತಿಯಲ್ಲಿ ಮಾತನಾಡಿದ ಶಿವಳ್ಳಿ ಸಂಪದ ಪುತ್ತೂರು ತಾಲೂಕು ಅಧ್ಯಕ್ಷ ಸತೀಶ್ ಕೆ.ಎಸ್., ಯುವಜನರು ಇಂತಹ ಧಾರ್ಮಿಕ ಪ್ರವಚನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.ತಾಲೂಕು ಮಹಿಳಾ ಸಂಪದ ಗೌರವಾಧ್ಯಕ್ಷೆ ವತ್ಸಲಾ ಹಾಗೂ ವಲಯ ಮಹಿಳಾ ಸಂಪದ ಅಧ್ಯಕ್ಷೆ ಅನ್ನಪೂರ್ಣ ಶೇವಿರೆ ಉಪಸ್ಥಿತರಿದ್ದರು.ರಾಮಕುಂಜ ಶಾಲೆಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಡಾ. ನಾರಾಯಣ ಭಟ್ ರಾಮಕುಂಜ ಹಾಗೂ ಯಶಸ್ವಿ ಉದ್ಯಮಿ ಮತ್ತು ಸಂಘಟಕರಾಗಿ ಗುರುತಿಸಿಕೊಂಡಿರುವ ಗಣೇಶ ಹೆಬ್ಬಾರ್ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಬೊಳುವಾರು ವಲಯದ ಕಾರ್ಯದರ್ಶಿ ಹರಿಪ್ರಸಾದ್ ದಾಳಿಂಬ, ಕೋಶಾಧಿಕಾರಿ ಅನಂತ ಪದ್ಮನಾಭ ಕದಂಬಳಿತ್ತಾಯ ಸೇರಿದಂತೆ ಶಿವಳ್ಳಿ ಸಂಪದದ ಸರ್ವ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು.‘ಹರಿವಂಶ ಪುರಾಣ ಪ್ರವಚನ’ವು ಸೆ.21ರವರೆಗೆ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.











