ಪುತ್ತೂರು: ಪುತ್ತೂರು ಶ್ರೀದೇವತಾ ಸಮಿತಿ, ಕಿಲ್ಲೆ ಮೈದಾನದ ಆಶ್ರಯದಲ್ಲಿ ನಡೆಯುವ 69ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವಕ್ಕೆ ಸೆ.14ರಂದು ಚಾಲನೆ ದೊರೆಯಲಿದೆ. ಸೆ.14ರಿಂದ 20ರವರೆಗೆ ಕಿಲ್ಲೆ ಮೈದಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಕ್ತಿಪ್ರಧಾನ ಕಾರ್ಯಕ್ರಮಗಳು ನಡೆಯಲಿವೆ.ಸೆ.14ರಂದು ಬೆಳಿಗ್ಗೆ ಕೋರ್ಟ್ ರಸ್ತೆ ವಿಶ್ವ ಸಂಕೀರ್ಣದಿಂದ ಗಣೇಶ ಮೂರ್ತಿಯ ಮೆರವಣಿಗೆ ನಡೆಯಲಿದ್ದು, ಬಳಿಕ ಕಿಲ್ಲೆ ಮೈದಾನದ ಮಂಟಪದಲ್ಲಿ ಬೆಳಿಗ್ಗೆ 11ಕ್ಕೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ಮಧ್ಯಾಹ್ನ 12ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರ್ಮಿಕ ಪರಿಷತ್ ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಉತ್ಸವದ ಏಳು ದಿನಗಳ ಅವಧಿಯಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಭಕ್ತಿ ರಸಮಂಜರಿ, ಸ್ಯಾಕ್ಸೋಫೋನ್ ವಾದನ, ಭರತನಾಟ್ಯ, ಮಕ್ಕಳ ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮ, ತುಳು ಯಕ್ಷಗಾನ ತಾಳಮದ್ದಳೆ ಹಾಗೂ ತುಳು ನಾಟಕ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ.ಸೆ.19ರಂದು ಬಾಲ ಗಣಪತಿ ಹೋಮಸೆ.19ರಂದು ಪ್ರಾತಃಕಾಲ 4.45ಕ್ಕೆ ಬಾಲ ಗಣಪತಿ ಹೋಮ ನಡೆಯಲಿದೆ. ಲೋಕಕಲ್ಯಾಣ ಹಾಗೂ ಸುಖ-ಸಮೃದ್ಧಿಗಾಗಿ ಹೋಮ ಆಯೋಜಿಸಲಾಗಿದ್ದು, ಸೂರ್ಯೋದಯಕ್ಕೂ ಮುನ್ನ ಪೂರ್ಣಾಹುತಿ ನಡೆಯಲಿದೆ.ಪ್ರತಿದಿನ ಅನ್ನಸಂತರ್ಪಣೆಉತ್ಸವದ ಅಂಗವಾಗಿ ಪ್ರತಿದಿನ ಬೆಳಿಗ್ಗೆ ಪೂಜೆ, 11.30ಕ್ಕೆ ಗಣಪತಿ ಹವನ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ರಾತ್ರಿ ರಂಗಪೂಜೆ ಹಾಗೂ 9.30ಕ್ಕೆ ಮಹಾಪೂಜೆ ನಡೆಯಲಿದೆ. ಏಳು ದಿನಗಳ ಕಾಲ ಮಧ್ಯಾಹ್ನ ಭಕ್ತಾಭಿಮಾನಿಗಳಿಗೆ ನಿರಂತರ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಬೆಳಿಗ್ಗೆ 10.30ಕ್ಕೆ ತುಲಾಭಾರ ಸೇವೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟಿ ತಿಳಿಸಿದ್ದಾರೆ.ಸೆ.20ರಂದು ಶೋಭಾಯಾತ್ರೆಉತ್ಸವದ ಸಮಾರೋಪದ ಅಂಗವಾಗಿ ಸೆ.20ರಂದು ಬೆಳಿಗ್ಗೆ 11ಕ್ಕೆ 108 ಕಾಯಿ ಗಣಹೋಮ ನಡೆಯಲಿದೆ. ಸಂಜೆ 5ಕ್ಕೆ ದೇವರ ಬಲಿ ಉತ್ಸವ, 6ಕ್ಕೆ ರಕ್ತೇಶ್ವರಿ ಹಾಗೂ ಪಂಜುರ್ಲಿ ದೈವಗಳ ಭೂತಕೋಲ, ರಾತ್ರಿ 7ಕ್ಕೆ ಸುಡುಮದ್ದು ಪ್ರದರ್ಶನದ ಬಳಿಕ ಶೋಭಾಯಾತ್ರೆ ನಡೆಯಲಿದೆ.ಶೋಭಾಯಾತ್ರೆಯು ಕೋರ್ಟ್ ರಸ್ತೆ, ಮುಖ್ಯ ರಸ್ತೆ, ದರ್ಬೆ, ತಾಲೂಕು ಕಚೇರಿ ರಸ್ತೆ, ರಾಧಾಕೃಷ್ಣ ಮಂದಿರ, ಬೊಳ್ಳಾರು, ಮಂಜಲ್ಪಡ್ಡು ಮಾರ್ಗವಾಗಿ ಸಾಗಲಿದೆ. ಬಳಿಕ ಕೆರೆಯಲ್ಲಿ ಶ್ರೀ ಗಣೇಶನ ವಿಗ್ರಹ ವಿಸರ್ಜನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ











