ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಶೈಕ್ಷಣಿಕ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿರುವ ಪ್ರಥಮ ಪದವೀಧರರ ಸಮಾರಂಭ ಕಾಲೇಜಿನಲ್ಲಿ ನಡೆಯಿತು.ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರೂ, ಕ್ಯಾಥೋಲಿಕ್ ಶಿಕ್ಷಣಮಂಡಳಿಯ ಅಧ್ಯಕ್ಷರೂ ಆದ ಪರಮಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಮಾರಂಭದಲ್ಲಿ ಮಾತನಾಡಿದ ಅವರು, “ಪದವಿ ಪಡೆಯುವುದರೊಂದಿಗೆ ಜ್ಞಾನಾರ್ಜನೆ ಮುಗಿಯುವುದಿಲ್ಲ. ನಿರಂತರ ಕಲಿಕೆ ಮತ್ತು ಹೊಸ ಜ್ಞಾನವನ್ನು ಅರಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪ್ರೀತಿಯಿಲ್ಲದ ಜ್ಞಾನ ಕೇವಲ ಮಾಹಿತಿಯಾಗುತ್ತದೆ; ಪ್ರೀತಿಯೊಂದಿಗೆ ಬೆಸೆದ ಜ್ಞಾನ ವಿವೇಕವಾಗುತ್ತದೆ” ಎಂದು ಹೇಳಿದರು.ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಸಂದರ್ಭದಲ್ಲಿ ಮಾನವೀಯತೆ, ಪ್ರೀತಿ ಮತ್ತು ಕರುಣೆಯ ಮೌಲ್ಯಗಳನ್ನು ಕಳೆದುಕೊಳ್ಳಬಾರದು. ಸಂಶೋಧನೆ ಮತ್ತು ಜ್ಞಾನವು ವೈಯಕ್ತಿಕ ಸಾಧನೆಗೆ ಮಾತ್ರ ಸೀಮಿತವಾಗದೆ ಸಮಾಜದ ಒಳಿತಿಗೆ ದಾರಿಯಾಗಬೇಕು. ಪದವೀಧರರು ಪೋಷಕರ ಪರಿಶ್ರಮ ಮತ್ತು ತ್ಯಾಗವನ್ನು ಸ್ಮರಿಸಿ, ತಮ್ಮ ಶಿಕ್ಷಣವನ್ನು ಸಮಾಜದ ಅರ್ಥಪೂರ್ಣ ಸೇವೆಗೆ ಬಳಸಬೇಕು ಎಂದು ಅವರು ಕರೆ ನೀಡಿದರು.ಮುಖ್ಯ ಅತಿಥಿ ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ. ಗಣೇಶ್ ಸಂಜೀವ್ ಪದವಿ ಪ್ರದಾನ ಭಾಷಣ ಮಾಡಿದರು. “ಇಲ್ಲಿಯವರೆಗೆ ಶಿಕ್ಷಣ ಸಂಸ್ಥೆಯ ರಕ್ಷಣಾತ್ಮಕ ವಾತಾವರಣದಲ್ಲಿ ಬೆಳೆದ ನೀವು, ಇನ್ನು ಮುಂದೆ ವೈವಿಧ್ಯಮಯ ಸವಾಲುಗಳನ್ನು ಹೊಂದಿರುವ ವಿಶಾಲ ಸಮಾಜವನ್ನು ಎದುರಿಸಬೇಕಾಗಿದೆ. ತರಗತಿಯಲ್ಲಿ ಕಲಿತ ಜ್ಞಾನವು ಜೀವನದ ನೈಜ ಸವಾಲುಗಳನ್ನು ಎದುರಿಸಲು, ಸಮಸ್ಯೆಗಳನ್ನು ವಿಶ್ಲೇಷಿಸಲು ಹಾಗೂ ಸೂಕ್ತ ನಿರ್ಧಾರ ಕೈಗೊಳ್ಳಲು ದಾರಿದೀಪವಾಗಬೇಕು” ಎಂದರು.ಕ್ಯಾಥೋಲಿಕ್ ಶಿಕ್ಷಣಮಂಡಳಿಯ ಕಾರ್ಯದರ್ಶಿ ಅತಿ ವಂದನೀಯ ಪ್ರವೀಣ್ ಲಿಯೋ ಲಸ್ರಾದೋ ಶುಭಾಶಂಸನೆಗೈದು, ಕನಸುಗಳನ್ನು ಹೊಂದಿ ಅವುಗಳನ್ನು ಸಾಕಾರಗೊಳಿಸಲು ನಿರಂತರ ಪರಿಶ್ರಮಿಸುವಂತೆ ಪದವೀಧರರಿಗೆ ಕರೆ ನೀಡಿದರು.ಕಾಲೇಜಿನ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಪ್ರಥಮ ರ‍್ಯಾಂಕ್ ಪಡೆದ ಐವರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಎಂಎಸ್‌ಡಬ್ಲ್ಯು ವಿಭಾಗದ ಸ್ನೇಹಾ ರೋಸ್ ಜೇಕಬ್, ಎಂ.ಕಾಂ.ನ ಚಸ್ಮಿಕಾ ಟಿ., ಎಂ.ಎಸ್ಸಿ. ಭೌತಶಾಸ್ತ್ರದ ನಿತೀಶ್, ಎಂ.ಎಸ್ಸಿ. ಗಣಿತಶಾಸ್ತ್ರದ ಅನುಪಮಾ ಹಾಗೂ ಎಂಸಿಎ ವಿಭಾಗದ ನಿರೀಕ್ಷಾ ಆರ್. ಅವರು ಸ್ಮರಣಿಕೆ ಸ್ವೀಕರಿಸಿದರು.ಎಂಎಸ್‌ಡಬ್ಲ್ಯು, ಎಂ.ಕಾಂ., ಎಂ.ಎಸ್ಸಿ. ಭೌತಶಾಸ್ತ್ರ, ಎಂ.ಎಸ್ಸಿ. ಗಣಿತಶಾಸ್ತ್ರ ಹಾಗೂ ಎಂಸಿಎ ವಿಭಾಗಗಳ ಒಟ್ಟು 60 ಪದವೀಧರರು ತಮ್ಮ ಸ್ನಾತಕೋತ್ತರ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪ್ರಮಾಣಪತ್ರ ಸ್ವೀಕರಿಸಿದರು. ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಪದವಿ ಪ್ರಮಾಣ ವಚನ ಬೋಧಿಸಿದರು.ಕಾಲೇಜಿನ ಸಂಚಾಲಕ ಅತಿ ವಂದನೀಯ ಜಾನ್ ಬಿ. ಸಲ್ದಾನ ಸ್ವಾಗತಿಸಿದರು. ಪರೀಕ್ಷಾಂಗ ಕುಲಸಚಿವ ಡಾ. ವಿನಯಚಂದ್ರ ವಂದಿಸಿದರು. ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಎಂ., ಶೈಕ್ಷಣಿಕ ಕುಲಸಚಿವ ಡಾ. ನಾರ್ಬರ್ಟ್ ಮಸ್ಕರೇನಸ್, ಹಣಕಾಸು ಅಧಿಕಾರಿ ಡಾ. ಎಡ್ವಿನ್ ಎಸ್. ಡಿಸೋಜ ಸೇರಿದಂತೆ ವಿವಿಧ ಅಧಿಕಾರಿಗಳು, ವಿಭಾಗಗಳ ಸಂಯೋಜಕರು, ಬೋಧಕ ಹಾಗೂ ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.ಕಾಲೇಜಿನ ಪರಂಪರೆ ಮತ್ತು ಶೈಕ್ಷಣಿಕ ಪಯಣವನ್ನು ಬಿಂಬಿಸುವ ‘ಲೆಗಸಿ’ ವೀಡಿಯೊ ಪ್ರದರ್ಶಿಸಲಾಯಿತು. ಎನ್‌ಸಿಸಿ ಕೆಡೆಟ್‌ಗಳು ಹಾಗೂ ಬ್ಯಾಂಡ್‌ನೊಂದಿಗೆ ನಡೆದ ಶೈಕ್ಷಣಿಕ ಮೆರವಣಿಗೆ ಸಮಾರಂಭಕ್ಕೆ ಮೆರುಗು ನೀಡಿತು.

Leave a Reply

Your email address will not be published. Required fields are marked *

Join WhatsApp Group
error: Content is protected !!