ಅರುಣಾ ಕಲಾಮಂದಿರದ ಬಳಿ ಅಪಾಯದ ಸ್ಥಿತಿ; ಪಾದಚಾರಿಗಳ ಸುರಕ್ಷತೆಗೆ ಕ್ರಮ ಅಗತ್ಯ ಪುತ್ತೂರು: ನಗರದ ಹೃದಯ ಭಾಗದಲ್ಲಿರುವ ಅರುಣಾ ಕಲಾಮಂದಿರದ ಸಮೀಪದ ಎಪಿಎಂಸಿ ತಿರುವಿನಲ್ಲಿ ಪಾದಚಾರಿಗಳು ಹಾಗೂ ವಾಹನ ಸವಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ.ಮೂರು ರಸ್ತೆಗಳು ಸೇರುವ ಈ ಪ್ರದೇಶದಲ್ಲಿ ಸದಾ ವಾಹನ ದಟ್ಟಣೆ ಕಂಡುಬರುತ್ತಿದ್ದು, ಪಾದಚಾರಿಗಳು ಸಂಚರಿಸಲು ಸೂಕ್ತ ಸ್ಥಳವೇ ಇಲ್ಲದಂತಾಗಿದೆ. ದರ್ಬೆ ಕಡೆಯಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ಪುತ್ತೂರು ಬಸ್ ನಿಲ್ದಾಣಕ್ಕೆ ತೆರಳಲು ಎಪಿಎಂಸಿ ರಸ್ತೆಯ ಮೂಲಕ ಸಂಚರಿಸುತ್ತವೆ. ಅಲ್ಲದೆ, ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಹಾಗೂ ಸುಳ್ಯ ಕಡೆಗೆ ತೆರಳುವ ವಾಹನಗಳೂ ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಹೀಗಾಗಿ ಪಾದಚಾರಿಗಳು ವಾಹನಗಳ ನಡುವೆ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.ಇದರಿಂದ ವಾಹನಗಳು ಹಾಗೂ ಪಾದಚಾರಿಗಳ ನಡುವೆ ಅಪಾಯದ ಪರಿಸ್ಥಿತಿ ಉಂಟಾಗಿದೆ. ರಸ್ತೆಯ ಬದಿಯಲ್ಲಿರುವ ಚರಂಡಿಯ ಸ್ಲ್ಯಾಬ್‌ಗಳು ಹಲವು ಕಡೆಗಳಲ್ಲಿ ಮುರಿದು ಹೋಗಿದ್ದು, ಮುರಿದ ಸ್ಲ್ಯಾಬ್‌ಗಳ ಅವಶೇಷಗಳು ಅಲ್ಲೇ ಬಿದ್ದಿವೆ. ಅಲ್ಲದೆ, ಸ್ಲ್ಯಾಬ್‌ಗಳ ಸರಳುಗಳು ಹೊರಗೆ ಚಾಚಿಕೊಂಡಿದ್ದು, ಅವುಗಳ ಮೇಲೆ ಪಾದಚಾರಿಗಳು ಆಯತಪ್ಪಿ ಬಿದ್ದರೆ ಗಂಭೀರ ಗಾಯಗಳಾಗುವ ಸಾಧ್ಯತೆ ಇದೆ.ಇತ್ತೀಚಿನ ದಿನಗಳಲ್ಲಿ ಕಲಮಂದಿರದಲ್ಲಿ ವಿವಿಧ ಸೇಲ್‌ಗಳು ನಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುತ್ತಿದ್ದಾರೆ. ಆದರೆ, ಪಾದಚಾರಿಗಳಿಗೆ ಸೂಕ್ತ ಸ್ಥಳಾವಕಾಶ ಇಲ್ಲದ ಕಾರಣ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಮತ್ತಷ್ಟು ಸಮಸ್ಯೆಯನ್ನು ಉಂಟುಮಾಡಿದೆ.ಸ್ಥಳೀಯರ ಪ್ರಕಾರ, ಚರಂಡಿಯ ಸ್ಲ್ಯಾಬ್‌ಗಳು ಹಾಳಾಗಿರುವುದರಿಂದ ಪ್ರತಿದಿನವೂ ಹಲವರು ಆಯತಪ್ಪಿ ಬೀಳುವುದು ಸಾಮಾನ್ಯವಾಗಿದೆ. ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಿದ್ದು ಸಣ್ಣಪುಟ್ಟ ಗಾಯಗಳಿಗೆ ಒಳಗಾಗುತ್ತಿದ್ದಾರೆ ಎನ್ನಲಾಗಿದೆ. ಚರಂಡಿಗೆ ಬೀಳುವ ಬದಲು ಆಯತಪ್ಪಿ ವಾಹನ ಸಂಚಾರದ ರಸ್ತೆಗೆ ಬಿದ್ದರೆ ದೊಡ್ಡ ಮಟ್ಟದ ದುರಂತ ಸಂಭವಿಸುವ ಆತಂಕವೂ ಸ್ಥಳೀಯರಲ್ಲಿ ಮೂಡಿದೆ.ಪುತ್ತೂರಿನ ಪ್ರಮುಖ ಪ್ರದೇಶದಲ್ಲೇ ಇಂತಹ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿರುವುದರಿಂದ ಸಂಬಂಧಪಟ್ಟ ಇಲಾಖೆ ಕೂಡಲೇ ಮುರಿದ ಚರಂಡಿ ಸ್ಲ್ಯಾಬ್‌ಗಳನ್ನು ದುರಸ್ತಿಪಡಿಸಿ, ಪಾದಚಾರಿಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.ಶಾಸಕ ಅಶೋಕ್ ರೈ ಅವರ ನೇರ ಗಮನಕ್ಕೆ ಬರಲಿಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಶಾಸಕ ಅಶೋಕ್ ಕುಮಾರ್ ರೈ ಅವರು ಸ್ಥಳದ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ತುರ್ತು ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಬೇಕು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಶಾಸಕರ ನೇರ ಗಮನಕ್ಕೆ ಈ ಸಮಸ್ಯೆ ಬಂದರೆ ಶೀಘ್ರದಲ್ಲೇ ಪರಿಹಾರ ದೊರೆಯುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ











